ನವದೆಹಲಿ, ಜೂ.10 (DaijiworldNews/HR): ಭತ್ತ, ಹತ್ತಿ, ಜೋಳ, ರಾಗಿ, ದ್ವಿದಳ ಧಾನ್ಯ ಸೇರಿದಂತೆ ಮುಂಗಾರು ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಹೆಚ್ಚಿಸಿದ್ದು, ರೈತರಿಗೆ ಸಿಹಿ ಸುದ್ದಿ ನೀಡಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಮುಖವಾಗಿ ಬೆಳೆಯುವ ಭತ್ತಕ್ಕೆ 72 ರೂ. ಎಂಎಸ್ಪಿ ಹೆಚ್ಚಳ ಮಾಡಲಾಗಿದ್ದು, ಈ ಮೂಲಕ 2021-22ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ಭತ್ತದ ಬೆಲೆ 1,940 ರೂ.ಗಳಾಗಲಿವೆ. ಪ್ರಮುಖ ವಾಣಿಜ್ಯ ಬೆಳೆ ಹತ್ತಿಯ ಬೆಂಬಲ ಬೆಲೆಯನ್ನೂ ಕೂಡ ಹೆಚ್ಚಿಸಲಾಗಿದ್ದು, ಇದಕ್ಕೆ 211 ರೂ.ಗಳಷ್ಟು ಏರಿಕೆ ಮಾಡಿ ಈ ಮೂಲಕ ಕ್ವಿಂಟಾಲ್ ಹತ್ತಿಗೆ 5,726 ರೂ.ಗಳಾಗಿವೆ.
ಇನ್ನು ಮತ್ತೂಂದು ತಳಿಯ ಹತ್ತಿಯ ಎಂಎಸ್ಪಿಯನ್ನೂ 200 ರೂ. ಹೆಚ್ಚಿಸಲಾಗಿದ್ದು, ಇದು ಪ್ರತಿ ಕ್ವಿಂಟಾಲ್ಗೆ 6,025 ರೂ.ಗಳಷ್ಟಾಗಿದೆ.
ಸಭೆ ಬಳಿಕ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಂಗಾರು ಹಂಗಾಮಿನ ಒಟ್ಟು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲಾದ್ದು, ಈ ಮೂಲಕ ರೈತರು ವೆಚ್ಚ ಮಾಡಿದ ಶೇ. 50ರಿಂದ 85ರಷ್ಟು ಹಣ ಈ ಕನಿಷ್ಠ ಬೆಂಬಲ ಬೆಲೆಯಿಂದಲೇ ಬರಲಿದೆ" ಎಂದು ಹೇಳಿದ್ದಾರೆ.