ಕೋಲ್ಕತ್ತಾ, ಜೂ 10 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಹಾಗೂ ಎನ್ ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವುದು ನಮ್ಮ ಮುಖ್ಯ ಗುರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ಹುದ್ದೆಯಿಂದ ಮೋದಿಯನ್ನು ಕೆಳಗಿಳಿಸಲು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ರೈತರನ್ನು ಒಗ್ಗೂಡಿಸುವುದಾಗಿ ಇದೇ ವೇಳೆ ಅವರು ಹೇಳಿಕೊಂಡಿದ್ದಾರೆ. ಕೇಂದ್ರದ ತಿದ್ದುಪಡಿ ರೈತ ಮಸೂದೆಯನ್ನು ಎಲ್ಲಾ ವಿರೋಧ ಪಕ್ಷಗಳೂ ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಕರೆ ನೀಡಿದ ಮಮತಾ ಬ್ಯಾನರ್ಜಿ, ರೈತರ ಪ್ರತಿಭಟನೆಗೆ ರೈತ ಮುಖಂಡ ಟಿಕಾಯತ್ ಅವರಿಗೆ ಬೆಂಬಲ ನೀಡಿದ್ದಾರೆ.
ರೈತರ ಚಳವಳಿಯೂ ಕೇವಲ ಪಂಜಾಬ್ ,ಹರ್ಯಾಣ ಅಥವಾ ಉತ್ತರ ಪ್ರದೇಶಕ್ಕೆ ಸೀಮಿತವಲ್ಲ ಎಂದು ತಿಳಿದುಕೊಳ್ಳಬೇಕು. ಪಶ್ಚಿಮ ಬಂಗಾಳ ಸರ್ಕಾರ ಯಾವತ್ತಿಗೂ ರೈತರ ಪರವಾಗಿ ಇರುತ್ತದೆ. ಈ ಚಳವಳಿ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಇಂದಿನಿಂದ ನನ್ನ ಗುರಿ, ಕೇಂದ್ರದ ಎನ್ ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವುದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೀತಿ ನಿರೂಪಣೆಗಳ ಬಗ್ಗೆ ರಾಜ್ಯಗಳು ಮಾತನಾಡಬೇಕು, ಆಗುತ್ತಿರುವ ಅನ್ಯಾಯ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಧ್ವನಿಯೆತ್ತಬೇಕು ಎಂದು ಒತ್ತಾಯಿಸಿದ್ದಾರೆ.