ಮುಂಬೈ, ಜೂ 10 (DaijiworldNews/MS): ಕಟ್ಟಡವೊಂದು ಕುಸಿದು ಬಿದ್ದು 11 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮುಂಬೈನ ಮಲಾಡ್ ವೆಸ್ಟ್ನ ನ್ಯೂ ಕಲೆಕ್ಟರ್ ಪ್ರದೇಶದಲ್ಲಿ ಸಂಭವಿಸಿದೆ. ಘಟನೆಯಿಂದ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬುಧವಾರ ತಡರಾತ್ರಿ 4 ಅಂತಸ್ತಿನ ವಸತಿ ಕಟ್ಟಡವೊಂದು ಮತ್ತೊಂದು ಕಟ್ಟಡದ ಮೇಲೆ ಕುಸಿದು ಬಿದ್ದಿದ್ದುಅನೇಕರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಸಂಶಯಿಸಲಾಗಿದೆ. ಸದ್ಯ ಘಟನೆ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಜೊತೆಯಾಗಿ ಶೋಧ ತಂಡಕ್ಕೆ ಕೈ ಜೋಡಿಸಿ ಗಾಯಗೊಂಡವರನ್ನು ರಕ್ಷಿಸಲು ಸಹಾಯ ಮಾಡಿದರು ಗಾಯಾಳುಗಳನ್ನು ಹತ್ತಿರದ ಬಿಡಿಬಿಎ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟೂ 15 ಮಂದಿಯನ್ನು ರಕ್ಷಿಸಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಲ ದಿನಗಳಲ್ಲಿ ಇಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಟ್ಟಡ ಕುಸಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ.