ಬೆಂಗಳೂರು, ಜೂ 09 (DaijiworldNews/MS): ರಾಜ್ಯದಲ್ಲಿ ಚಿತೆಗಳಿಗೆ ಹಚ್ಚಿದ ಜ್ವಾಲೆ ಇನ್ನೂ ಆರಿಲ್ಲ. ಅದು ಯಾವಾಗ ಆರುತ್ತದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಕ್ಷುಲ್ಲಕ ರಾಜಕಾರಣ ಅಗತ್ಯವಿದೆಯೇ? ಎಂದು ಬಿಜೆಪಿ ಸರ್ಕಾರ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ, ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಕುಮಾರಸ್ವಾಮಿ "ಬಿಎಸ್ ಯಡಿಯೂರಪ್ಪನವರು ತಾವು ಖರೀದಿಸಿ ತಂದ ಕುದುರೆಗಳ ಮೇಲೆ ತಾವೇ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ಅದರ ಬದಲಿಗೆ ಮಾಧ್ಯಮಗಳು ಬಣ್ಣಿಸುವ 'ಸೋಕಾಲ್ಡ್ ಹುಲಿ, ಬಾಹುಬಲಿ' ಮುಂತಾದವರನ್ನುಮುಖ್ಯಮಂತ್ರಿ ಸೀಟಿನ ಮೇಲೆ ಕೂರಿಸಿದ್ದೇ ಸದ್ಯದ ರಾಜಕೀಯ ದುಸ್ಥಿತಿಗೆ ಕಾರಣ. ಇದು ಯಡಿಯೂರಪ್ಪನವರ ಸ್ವಯಂಕೃತ ಅಪರಾಧ." ಎಂದಿದ್ದಾರೆ,
ಅಲ್ಲದೆ "ಇನ್ನೊಂದೆಡೆ, 'ಅನ್ನ ಹಳಸಿದೆ, *** ಕಾದಿದೆ' ಎಂಬಂತೆ ರಾಜ್ಯದ ಮತ್ತೊಂದು ರಾಜಕೀಯ ಪಕ್ಷ ಕಾದು ಕುಳಿತಿದೆ. ರಾಜ್ಯದಲ್ಲಿ ಹೊತ್ತಿರುವ ಚಿತೆಗಳ ಬೆಂಕಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೆಂದು ಹೋದರೆ, ನಂತರದ ದಿನಗಳಲ್ಲಿ ತನ್ನನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ಆ ರಾಷ್ಟ್ರೀಯ ಪಕ್ಷ ಪ್ರಯತ್ನಗಳನ್ನು ಪೈಪೋಟಿಗೆ ಬಿದ್ದು ನಡೆಸುತ್ತಿದೆ." ಎಂದು ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದ್ದಾರೆ
"ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಅದು ಎಂಥಾ ಸಂದರ್ಭದಲ್ಲಿ?ಕೋವಿಡ್ ಅಟ್ಟಹಾಸ ಮೆರೆಯುತ್ತಿರುವ ಹೊತ್ತಿನಲ್ಲಿ, ಬ್ಲಾಕ್ ಫಂಗಸ್ ಎಂಬ ಭಯಾನಕ ರೋಗ ಜನರನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಗಳಿಗೆಯಲ್ಲಿ, ಮಕ್ಕಳು ಪಿಡುಗಿಗೆ ಸಿಲುಕಲಿದ್ದಾರೆಂಬ ಎಚ್ಚರಿಕೆಗಳ ನಡುವಿನಲ್ಲಿ, ಕನ್ನಡದ ಅಸ್ಮಿತೆಗೆ ದಕ್ಕೆಯಾಗಿರುವ ಕಾಲಘಟ್ಟದಲ್ಲಿ.
"ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಈಗ ರಾಜ್ಯದ ಎದುರಿಗೆ ಇರುವುದು ನಾಯಕತ್ವದ ಪ್ರಶ್ನೆಯೋ? ಅಥವಾ ಜನರ ಹಿತದ ಪ್ರಶ್ನೆಯೋ? ರಾಜ್ಯದಲ್ಲಿ ಚಿತೆಗಳಿಗೆ ಹಚ್ಚಿದ ಜ್ವಾಲೆ ಇನ್ನೂ ಆರಿಲ್ಲ. ಅದು ಎಂದು ಆರುತ್ತದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಕ್ಷುಲ್ಲಕ ರಾಜಕಾರಣ ಅಗತ್ಯವಿದೆಯೇ?" ಎಂದು ಪ್ರಶ್ನಿಸಿದ್ದಾರೆ.
"ರಾಜ್ಯ ಸರ್ಕಾರ ಕೋವಿಡ್ ಸ್ಥಿತಿಯನ್ನು ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸರ್ಕಾರ ಇನ್ನಾದರೂ ತಿದ್ದಿಕೊಳ್ಳಲಿದೆ ಎಂದು ನಾವು ಭಾವಿಸಿದೆವು. ಇಂಥ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸಿ ರಾಜಕೀಯ ಮಾಡುವುದು ಬೇಡ ಎಂದು ಜೆಡಿಎಸ್ ನಿರ್ಧರಿಸಿತ್ತು. ಆದರೆ, ಬಿಜೆಪಿ ಅಧಿಕಾರದ ಲಾಲಸೆ ಪ್ರದರ್ಶಿಸಿದರೆ ಸುಮ್ಮನಿರುವುದು ಹೇಗೆ?
ರಾಜ್ಯದ ಸಂಕಷ್ಟದ ಕಾಲದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಅಧಿಕಾರದ ಲಾಲಸೆ, ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಕೋವಿಡ್ ನಿಯಮಗಳನ್ನೆಲ್ಲ ಮೀರಿ ಬೀದಿಗೆ ಬಿದ್ದಿರುವ ಕಾಂಗ್ರೆಸ್ ಪಕ್ಷಗಳೆರಡೂ ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಸಂಕಷ್ಟದ ಪರಿಸ್ಥಿತಿಯನ್ನೇ ಅಧಿಕಾರಕ್ಕೇರಲು ಏಣಿ ಮಾಡಿಕೊಳ್ಳುತ್ತಿರುವ ಈ ಪಕ್ಷಗಳ ನಡೆಯನ್ನು ಜನ ಗಮನಿಸಬೇಕು.
"ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಕನ್ನಡ, ಕರ್ನಾಟಕದ ಅಸ್ಮಿತೆ ಪ್ರಶ್ನೆ ಮಾಡುವಂಥ ಘಟನೆಗಳು ಒಂದರ ಹಿಂದೊಂದರಂತೆ ನಡೆದವು. ಈ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್ ಏನು ಮಾಡಿದವು? ಇವರೆಲ್ಲ ರಾಜಕೀಯ ಮಾಡುತ್ತಿರುವುದು ಕರ್ನಾಟಕದಲ್ಲೇ ಅಲ್ಲವೇ? ಆದರೆ, ಕರ್ನಾಟಕದ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಇವರೆಲ್ಲ ಅದ್ಯಾವ ಬಿಲದಲ್ಲಿ ಅಡಗಿದ್ದರು?" ಎಂದು ಕುಮಾರಸ್ವಾಮಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.