ಬೆಂಗಳೂರು, ಜೂ 09 (DaijiworldNews/MS): ಕೊರೊನಾ ಸೋಂಕು ಕೊಂಚ ನಿಯಂತ್ರಣಕ್ಕೆ ಬಂದಿರುವ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಸಲು ಸರ್ಕಾರ ಮುಂದಾಗಿದೆ. ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಪ್ರಸ್ತುತ ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್ ಡೌನ್ ಜೂನ್ 14ಕ್ಕೆ ಮುಗಿಯಲಿದ್ದು, ಜೂನ್ 14ರ ಬಳಿಕ ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಲಿರುವ ಸಾಧ್ಯತೆ ಇದೆ. ಇದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರ ಹೇಳಿಕೆಯೂ ಪುಷ್ಟಿ ನೀಡಿದೆ.
" ರಾಜ್ಯದಲ್ಲಿ ಜೂನ್ 14ರ ಬಳಿಕ ತಕ್ಷಣ ಅನ್ ಲಾಕ್ ಮಾಡುವುದರ ಬದಲಾಗಿ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಸರ್ಕಾರವೂ ಸುಮಾರು ಐದು ಹಂತಗಳಲ್ಲಿ ಅನ್ ಲಾಕ್ ಮಾಡುವ ಚಿಂತನೆ ಮಾಡಲಾಗಿದೆ. ಮೊದಲ ಹಂತದಲ್ಲಿ ಖರೀದಿಯ ಅವಧಿಯನ್ನು ವಿಸ್ತರಣೆ ಮಾಡುವ ಚಿಂತನೆ ಇದೆ. ಬೆಳಿಗ್ಗೆ 6 ರಿಂದ 10ರವರೆಗೆ ನೀಡಲಾಗಿರುವ ಅವಕಾಶವನ್ನು 12 ಗಂಟೆಯವರೆಗೆ ವಿಸ್ತರಿಸುವ ಚಿಂತನೆ ಇದೆ" ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ
ಇನ್ನೂ ಪಾರ್ಕ್ ಗಳಲ್ಲಿ ವಾಕಿಂಗ್ ಮಾಡೋದಕ್ಕೆ ಅವಕಾಶ ನೀಡಬಹುದು ಎಂಬುದಾಗಿ ತಜ್ಞರು ಸೂಚಿಸಿದ್ದಾರೆ. ಹೀಗಾಗಿ ಅನ್ ಲಾಕ್ ಮೊದಲ ಹಂತದಲ್ಲಿಯೇ ಪಾರ್ಕ್ ನಲ್ಲಿ ವಾಕಿಂಗ್ ಮಾಡೋದಕ್ಕೂ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜೂನ್.14ರ ನಂತ್ರ ಹಂತ ಹಂತವಾಗಿ ಅನ್ ಲಾಕ್ ಜಾರಿಗೊಳಿಸೋ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.