ಕಲಬುರ್ಗಿ, ಜೂ 09 (DaijiworldNews/MS): ನಿದ್ರೆಯಲ್ಲಿದ್ದ ಕೋವಿಡ್ ಸೋಂಕಿತ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕಲಬುರಗಿ ನಗರದ ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜೂ.8ರ ರಾತ್ರಿ ನಡೆದಿದೆ.
25 ವರ್ಷ ಯುವತಿ ಕೊರೊನಾ ಸೋಂಕಿಗೆ ಒಳಗಾಗಿ ಕೋವಿಡ್ ವಾರ್ಡ್ ಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ ಖಾಸಗಿ ಆ್ಯಂಬುಲೆನ್ಸ್ ಚಾಲಕ ಪಿಂಟು ಎಂಬಾತ ಅಲ್ಲಿಗೆ ಬಂದು ಡೈಪರ್ ಹಾಗೂ ಯೂರಿನ್ ಪೈಪ್ ತೆಗೆದು ಹಾಕಿ ಆಕೆಯ ಮೇಲೆ ಅತ್ಯಾಚಾರ ಯತ್ನಕ್ಕೆ ಮುಂದಾಗಿದ್ದಾನೆ. ಈ ವೇಳೆ ಯುವತಿ ಎಚ್ಚರಗೊಂಡು ಚೀರಾಟ ನಡೆಸಿದಾಗ ಅಕ್ಕ-ಪಕ್ಕದ ರೋಗಿಗಳು ಕೂಡ ಎಚ್ಚರಗೊಂಡಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಬಳಿಕ ಮಾಹಿತಿ ಪಡೆದ ಸೋಂಕಿತೆಯ ಕುಟುಂಬಸ್ಥರು ಜಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಸೇರಿದ್ದು ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬ್ರಹ್ಮಪೂರ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ದೌಡಾಯಿಸಿ ಘಟನೆ ವಿವರ ಪಡೆದು ಖಾಸಗಿ ಆ್ಯಂಬುಲೆನ್ಸ್ ಚಾಲಕ ಆರೋಪಿ ಪಿಂಟು ವನ್ನು ಬಂಧಿಸಿದ್ದಾರೆ.