ಬೆಂಗಳೂರು, ಜೂ 09 (DaijiworldNews/MS): ಕೊರೊನಾ ನಿಯಂತ್ರಣಕ್ಕಾಗಿ ಪಡೆದುಕೊಳ್ಳುವ ಕೊವೀಡ್ ಲಸಿಕೆಯ ಎರಡನೇ ಡೋಸ್ ಅವಧಿಯನ್ನು 4ರಿಂದ 6 ವಾರಗಳಿಗೆ ಕುಗ್ಗಿಸುವ ರಾಜ್ಯದ ಕ್ರಮಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಸಂಬಂಧ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರವೂ ಕೇಂದ್ರಕ್ಕೆ ಲಸಿಕೆಯ ಎರಡನೇ ಡೋಸ್ ಅವಧಿಯನ್ನು ತಗ್ಗಿಸುವಂತೆ ಪತ್ರ ಬರೆದು ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರವೂ 4ರಿಂದ 6 ವಾರಗಳಿಗೆ ತಗ್ಗಿಸುವ ಕ್ರಮಕ್ಕೆ ಸಮ್ಮತಿ ಸೂಚಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳು, ಉದ್ಯೋಗ ಮಾಡುವವರಿಗೆ ನಗರದ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ಜೂನ್ 11ರವರೆಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಲಸಿಕೆ ಅಭಿಯಾನದಲ್ಲಿ ಇಲ್ಲಿವರೆಗೆ 1,200 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಆದ್ಯತಾ ಗುಂಪಿನ ಕೋಟಾದಲ್ಲಿ ಇವರೆಲ್ಲರಿಗೂ ಲಸಿಕೆ ಕೊಡಲಾಗಿದ್ದು, 2ನೇ ಡೋಸ್ ನೀಡುವ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು.
ಬೆಂಗಳೂರು ಮಾತ್ರವಲ್ಲದೆ ಇತರ ಜಿಲ್ಲೆಗಳಲ್ಲಿಯೂ ವಿದೇಶಗಳಲ್ಲಿ ವ್ಯಾಸಂಗ ಮತ್ತು ಉದ್ಯೋಗ ಮಾಡುವ ಕನ್ನಡಿಗರಿಗೆ ಇದೇ ರೀತಿಯ ಲಸಿಕೆ ಅಭಿಯಾನ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.