ಬೆಂಗಳೂರು, ಜೂ 09 (DaijiworldNews/MS): ಕೊರೊನಾ ಕ್ರೌರ್ಯದ ನಡುವೆ ಬ್ಲ್ಯಾಕ್ ಫಂಗಸ್ ಕೂಡ ಸದ್ದಿಲ್ಲದೆ ಸುತ್ತಿಕೊಳ್ತಿದೆ. ಕೊರೊನಾ ಇಳಿಕೆಯತ್ತ ಸಾಗುತ್ತಿದ್ದರೂ ಸಮಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿನ ಆತಂಕ ಮುಂದುವರಿದಿದೆ. ಈವರೆಗೂ ಕೇವಲ ವಯಸ್ಸಾದವರಲ್ಲಿ ಹಾಗೂ ಮಧ್ಯವಯಸ್ಕರಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಸೋಂಕು ಇದೀಗ ಮಕ್ಕಳಲ್ಲಿಯೂ ಪತ್ತೆಯಾಗುತ್ತಿದೆ.
ಬೆಂಗಳೂರು ನಗರದಲ್ಲಿ10 ವರ್ಷದೊಳಗಿನ ಮೂವರು ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಒಂದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ .ಟೈಪ್ ಒನ್ ಡಯಾಬಿಟಿಸ್ ಇರುವ ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿದ್ದು, ಮಕ್ಕಳಲ್ಲಿ ಇಮ್ಯುನಿಟಿ ಕಡಿಮೆ ಇರುತ್ತದೆ. ಹೀಗಾಗಿ ಬ್ಲ್ಯಾಕ್ ಫಂಗಸ್ ಮೂವರು ಮಕ್ಕಳಲ್ಲಿ ಪತ್ತೆಯಾಗಿದೆ.
ಈ ಹಿಂದೆ ಬಳ್ಳಾರಿ ಜಿಲ್ಲೆಯ 11 ವರ್ಷದ ಬಾಲಕಿ ಹಾಗೂ ಚಿತ್ರದುರ್ಗ ಜಿಲ್ಲೆಯ 14 ವರ್ಷದ ಬಾಲಕನಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿತ್ತು.