ಬೆಂಗಳೂರು, ಜೂ.08 (DaijiworldNews/HR): "ಬಿಜೆಪಿ ಸರ್ಕಾರವು ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ಈಗ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರು ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲ್ಲುವುದು ಖಚಿತ, ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಯಡಿಯೂರಪ್ಪ ಅವರ ವೈಪಲ್ಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತಾಗಿದೆ, ರಾಜ್ಯದ ನಾಯಕರಿಗೂ ಗೊತ್ತಿದೆ. ಜನರಿಗೂ ಅವರ ನಾಟಕ ತಿಳಿಸಿದೆ. ಅದಕ್ಕಾಗಿ ಬಿಎಸ್ವೈಯವರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ" ಎಂದರು.
"ಯಡಿಯೂರಪ್ಪ ರಾಜ್ಯ ಕಂಡ ಕಳಪೆ ಮುಖ್ಯಮಂತ್ರಿ. ಅವರನ್ನು ಅಧಿಕಾರದಿಂದ ಕೆಳಗಿಸಬೇಕು ಎಂದು ಬಿಜೆಪಿಯಲ್ಲಿ ಹೊಸದಾಗಿ ಚರ್ಚೆಯಾಗುತ್ತಿಲ್ಲ. ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ. ಆದರೆ ಪರ್ಯಾಯ ನಾಯಕ ಯಾರು ಎನ್ನುವ ಚಿಂತೆ ಬಿಜೆಪಿಯನ್ನು ಕಾಡುತ್ತಿರುವುದರಿಂದ ಇಲ್ಲಿಯವರೆಗೆ ಸುಮ್ಮನಿದ್ದಾರೆ" ಎಂದಿದ್ದಾರೆ.
ಇನ್ನು "ಹೈಕಮಾಂಡ್ ನಾಯಕರ ಮನವೋಲಿಸುವುದಕ್ಕಾಗಿ ಯಡಿಯೂರಪ್ಪ ಅನೇಕ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎಂದು ತೋರಿಸುವ ಪಯತ್ನವಾಗಿ ರಾಜಿನಾಮೆ ನೀಡಲು ಸಿದ್ಧ ಎಂದಿದ್ದಾರೆ. ನಾವೇನು ಸರ್ಕಾರ ಬೀಳಿಸಲ್ಲ, ಅವರಾಗಿ ಬಿದ್ದು ಹೋದರೆ ಸರ್ಕಾರ ರಚಿಸಲು ನಾವು ರೆಡಿ" ಎಂದು ಹೇಳಿದ್ದಾರೆ.