ಉತ್ತರ ಪ್ರದೇಶ, ಜೂ.08 (DaijiworldNews/HR): ಏಪ್ರಿಲ್ 26ರಂದು ಆಗ್ರಾದ ಪರಾಸ್ ಖಾಸಗಿ ಆಸ್ಪತ್ರೆಯಲ್ಲಿ 22 ಕೊರೊನಾ ರೋಗಿಗಳು ಸಾವನ್ನಪ್ಪಿದ್ದು, ಅಣಕು ಕಾರ್ಯಾಚರಣೆಗಾಗಿ ವೈದ್ಯಕೀಯ ಆಮ್ಲಜನಕ ಸರಬರಾಜನ್ನು ಕಡಿತಗೊಳಿಸಿದ್ದರಿಂದ ಈ ಘಟನೆ ನಡೆದಿರಬಹುದು ಎಂಬ ಪ್ರಶ್ನೆ ಹುಟ್ಟುಕೊಂಡಿದ್ದು, ಆಗ್ರಾ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಪರಾಸ್ ಆಸ್ಪತ್ರೆ ಮಾಲೀಕ ಅರಿಂಜನ್ ಜೈನ್ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ಅಣಕು ಕಾರ್ಯಾಚರಣೆ ನಂತರ 22 ರೋಗಿಗಳು ಸಾವನ್ನಪ್ಪಿರುವ ಸಂಗತಿ ಪ್ರಸ್ತಾಪವಾಗಿತ್ತು ಎನ್ನಲಾಗಿದೆ.
ಅರಿಂಜನ್ ಜೈನ್ ಅವರ ವೈರಲ್ ಆಗಿರುವ ವಿಡಿಯೋದಲ್ಲಿ, "ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದ್ದು, ಡಿಸ್ಚಾರ್ಜ್ ಆಗುವಂತೆ ಜನರಿಗೆ ಮನವಿ ಮಾಡಿದರೂ ಯಾರೂ ಕೂಡ ಸಿದ್ಧರಿರಲಿಲ್ಲ. ಆದ ಕಾರಣ ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದು, ಏಪ್ರಿಲ್ 26ರ ಬೆಳಿಗ್ಗೆ ಏಳು ಗಂಟೆಗೆ 5 ನಿಮಿಷಗಳ ಕಾಲ ಆಕ್ಸಿಜನ್ ಸರಬರಾಜನ್ನು ನಿಲ್ಲಿಸಿದ್ದೆವು. 22 ಕೊರೊನಾ ಸೋಂಕಿತರು ತೀವ್ರ ಉಸಿರಾಟ ತೊಂದರೆಯಲ್ಲಿದ್ದು, ಕೂಡಲೇ ನಾವು ಉಳಿದ 74 ರೋಗಿಗಳ ಕುಟುಂಬದವರಿಗೆ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮಾಡುವಂತೆ ಸೂಚಿಸಿದೆವು" ಎಂದು ಹೇಳಿದ್ದಾರೆ.
ಇನ್ನು ಅರಿಂಜನ್ ಜೈನ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆಗೆ ಆಗ್ರಹಿಸಿದ್ದು, ಆಗ್ರಾ ಮ್ಯಾಜೆಸ್ಟ್ರೇಟ್ ಪಿಎನ್ ಸಿಂಗ್ ಹಾಗೂ ಮುಖ್ಯ ವೈದ್ಯಾಧಿಕಾರಿ ಆರ್ಸಿ ಪಾಂಡೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ.
ಈ ವಿಡಿಯೋ ಕುರಿತು ಅರಿಂಜನ್ ಜೈನ್ ಪ್ರತಿಕ್ರಿಯಿಸಿದ್ದು, "ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾವು ಏಪ್ರಿಲ್ 26ರಂದು ಅಣಕು ಕಾರ್ಯಾಚರಣೆ ನಡೆಸಿದ್ದೆವು. ತುಂಬಾ ಗಂಭೀರ ರೋಗಿಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಈ ಕಾರ್ಯಾಚರಣೆ ನಡೆಸಿದ್ದು ನಿಜ, ಆದರೆ ಏಪ್ರಿಲ್ 26ರಂದು ನಾಲ್ಕು ಕೊರೊನಾ ರೋಗಿಗಳು ಅಷ್ಟೆ ಮೃತಪಟ್ಟಿದ್ದರು" ಎಂದು ಹೇಳಿದ್ದಾರೆ.