ರಾಮನಗರ, ಜೂ 8 (DaijiworldNews/MS): ಮಕ್ಕಳಿಗೆ ಮದ್ಯ ಕುಡಿಸಿ ನಶೆಯಲ್ಲಿ ವರ್ತಿಸುವುದನ್ನು ಚಿತ್ರೀಕರಿಸಿ ವಿಕೃತಿ ಮೆರೆದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವ ಪ್ರಮುಖ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಾಳೆ ತೋಟದಲ್ಲಿ 10 ವರ್ಷದೊಳಗಿನ 7 ಮಕ್ಕಳು ಬಾಡೂಟದ ಜತೆಗೆ ಮದ್ಯ ಕುಡಿಯುವಂತೆ ಉತ್ತೇಜಿಸುತ್ತಿವ ವಿಡಿಯೋ ಸೇರಿ ಮೂರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮದ್ಯಪಾನ ಮಾಡಿದ ಮಕ್ಕಳು ಬೈದಾಡಿಕೊಳ್ಳುತ್ತಾರೆ.ಅಲ್ಲದೆ ಎಲ್ಲರನ್ನು ಅವಾಚ್ಯವಾಗಿ ನಿಂದಿಸುವ ಬಾಲಕನೊಬ್ಬ ಮತ್ತಷ್ಟು ಮದ್ಯಕ್ಕೆ ಬೇಡಿಕೆ ಇಡುತ್ತಾನೆ. ಘಟನೆ ನಡೆದ ಸ್ಥಳದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದರು.
ತನಿಖೆ ವೇಳೆ ರಾಮನಗರದ ಕನಕಪುರ ತಾಲೂಕಿನಲ್ಲಿ ಮರಳಿಪುರ ಎಂಬ ಗ್ರಾಮದಲ್ಲಿಈ ಘಟನೆ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋಡಿಹಳ್ಳಿ ಠಾಣೆಯ ಪೊಲೀಸರು, ಪ್ರಕರಣ ಸಂಬಂಧ ಗಣೇಶ್ ಮತ್ತು ಕರಿಯಪ್ಪ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಬ್ಬ ಆರೋಪಿ ಸೋಮಸುಂದರ್ ಎಂಬುವವನು ತಲೆ ಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮದ್ಯದ ಸೇವಿಸಿ ತೂರಾಡುವ ಪುಟ್ಟ ಮಕ್ಕಳ ವಿಡಿಯೋ ವೈರಲ್ - ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ