ಬೆಂಗಳೂರು, ಜೂ.08 (DaijiworldNews/HR): ರಮೇಶ್ ಜಾರಕಿಹೊಳಿ ಸಿಡಿ ಪ್ರಕಣಕ್ಕೆ ಸಂಬಂಧಿಸಿದಂತೆ ಆರೋಪಿಯ ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದು ಸೂಕ್ತ ತನಿಖೆ ನಡೆಸಿಲ್ಲ ಎಂದು ಹೈಕೋರ್ಟ್ಗೆ ಯುವತಿ ಅರ್ಜಿ ಸಲ್ಲಿಸಿದ್ದಾಳೆ.
ಸಿ.ಡಿ ಯುವತಿಯು ಹೈಕೋರ್ಟ್ಗೆ ನೀಡಿರುವ ಅರ್ಜಿಯಲ್ಲಿ, "ರಮೇಶ್ ಜಾರಕಿಹೊಳಿಯ ಸಮರ್ಪಕ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ, ಕೇವಲ ಬಿಪಿ, ಶುಗರ್ ಚೆಕ್ ಮಾಡಿದ್ದಾರೆ. ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದಿಲ್ಲ. ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿದ್ದು, ಆರೋಪಿಗೆ ಗೃಹ ಸಚಿವರೊಂದಿಗೆ ಸಂಪರ್ಕವಿದೆ. ಹೀಗಾಗಿ ಸರ್ಕಾರ ನೇಮಿಸಿದ ತಂಡದಿಂದ ತನಿಖೆ ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ಇನ್ನು ಎಸ್ಐಟಿ ತನಿಖೆ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಯುವತಿ ಎಸ್ಐಟಿ ತನಿಖೆ ರದ್ದುಪಡಿಸಲು ಕೋರಿದ್ದು, ಎಸ್ಐಟಿ ರದ್ದುಪಡಿಸಿ ಹೊಸ ತಂಡ ರಚಿಸಲು ಮನವಿ ಮಾಡಿರುವ ಯುವತಿ ಈವರೆಗಿನ ಎಸ್ಐಟಿ ತನಿಖೆ ಪರಿಗಣಿಸದಂತೆಯೂ ಮನವಿ ಮಾಡಿಕೊಂಡಿದ್ದಾರೆ. ಅರ್ಜಿಯ ಫಲವಾಗಿ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರ ನ್ಯಾಯಪೀಠವು ಎಸ್ಐಟಿ, ಸರ್ಕಾರ, ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ ತನಿಖೆ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ವಿಚಾರಣೆ ನಡೆಸಿ, ಪ್ರಕರಣದ ತನಿಖೆಗಾಗಿ ರಚಿಸಿರುವ ಎಸ್ಐಟಿಯು ಹೈಕೋರ್ಟ್ಗೆ ತನಿಖೆಯ ಪ್ರಗತಿ ವರದಿ ಸಲ್ಲಿಸಿದ್ದು, ಅದನ್ನು ತೆರೆದು ವಿಭಾಗೀಯ ಪೀಠ ಪರಿಶೀಲನೆ ನಡೆಸಿತ್ತು.