ಹೊಸದಿಲ್ಲಿ, ಜೂ.08 (DaijiworldNews/HR): ಕೊರೊನಾ ಲಸಿಕೆಯ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕೊರೊನಾ ಲಸಿಕಾ ಅಭಿಯಾನಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಜನರ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ ಜನರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿದ್ದು, ಆಕ್ರೋಶದ ಕಾರಣದಿಂದ ರಾಜಕೀಯ ಮಾಡುವುದನ್ನು ಬಿಟ್ಟು ಲಸಿಕೆಯ ಮೇಲೆ ನಿಯಂತ್ರಣ ಹೊಂದಲು ನಿರ್ಧರಿಸಿದ್ದೇನೆ" ಎಂದರು.
ಇನ್ನು "ನಾವು ಬಿಜೆಪಿಯ ಲಸಿಕೆಗೆ ವಿರೋಧ ಮಾಡುತ್ತೇವೆ. ಆದರೆ ಭಾರತ ಸರ್ಕಾರದ ಲಸಿಕೆಗೆ ಸ್ವಾಗತಿಸುತ್ತೇವೆ. ನಾವು ಲಸಿಕೆ ಪಡೆದು, ಜನರನ್ನೂ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸುತ್ತೇವೆ" ಎಂದಿದ್ದಾರೆ.
ಜೂ 21ರಿಂದ 18 ರಿಂದ 44 ವರ್ಷ ವಯಸ್ಸಿನ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಗಳನ್ನು ಖರೀದಿಸಲು ಮತ್ತು ಅವುಗಳನ್ನು ರಾಜ್ಯಗಳಿಗೆ ಉಚಿತವಾಗಿ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.