ಬೆಂಗಳೂರು, ಜೂ 8 (DaijiworldNews/MS): ಕೇಂದ್ರ ಸರ್ಕಾರವು ಲಸಿಕಾ ನೀತಿಗೆ ಸಂಬಂಧಿಸಿದಂತೆ ಹಲವು ಬಾರಿ 'ಯೂ-ಟರ್ನ್' ಹೊಡೆಯುತ್ತಿದ್ದು, ವೃತ್ತದಲ್ಲಿ ತಿರುಗುತ್ತಿರುವಂತೆ ಅನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಜೂ.7 ರ ಸಂಜೆ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ " ದೇಶದ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಉಚಿತವಾಗಿಯೇ ಲಸಿಕೆಯನ್ನು ನೀಡಲಿದೆ. ಲಸಿಕೆಗಾಗಿ ಯಾವುದೇ ರಾಜ್ಯವೂ ಕೇಂದ್ರಕ್ಕೆ ಹಣ ನೀಡಬೇಕಾಗಿಲ್ಲ ಎಂದಿರುವ ಪ್ರಧಾನಿ, ಅಂತಾರಾಷ್ಟ್ರೀಯ ಯೋಗದಿನವಾದ ಜೂ. 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದರು.
ಇದೇ ವಿಚಾರವಾಗಿ ಟ್ವಿಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷರು, " ಕೇಂದ್ರ ಸರ್ಕಾರವು ಲಸಿಕಾ ನೀತಿಗೆ ಸಂಬಂಧಿಸಿದಂತೆ ಹಲವು ಬಾರಿ 'ಯೂ-ಟರ್ನ್' ಹೊಡೆಯುತ್ತಿದ್ದು, ವೃತ್ತದಲ್ಲಿ ತಿರುಗುತ್ತಿರುವಂತೆ ಅನಿಸುತ್ತಿದೆ. ರಾಜ್ಯಗಳೋ ಅಥವಾ ಕೇಂದ್ರವೋ? ಉಚಿತವೋ ಅಥವಾ ಹಣ ನೀಡಬೇಕೋ? 45+ ಅಥವಾ ಎಲ್ಲರಿಗೂ? ನಮಗೆ ಸರಿಯಾದ ನಿರ್ಧಾರ ಕೈಗೊಳ್ಳುವ ಸರ್ಕಾರ ಬೇಕಿತ್ತು, ಆದರೆ ಇದೇಕೋ ಗೊಜಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಭಾಷಣದಲ್ಲಿ ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ ಲಸಿಕೆ ವಿತರಣೆಯ ಪೂರ್ತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊರಲಿದ್ದು, ಇನ್ನೆರಡು ವಾರದಲ್ಲಿ ಆ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು. ಉಚಿತವಾಗಿ ಲಸಿಕೆ ಪಡೆಯಲು ಇಚ್ಛೆ ಇಲ್ಲದವರು ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಸಿಗಲಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಬಾಬ್ತು 150 ರೂಪಾಯಿ ಸೇವಾಶುಲ್ಕ ಮಾತ್ರ ಪಡೆಯಬಹುದು ಎಂದು ಹೇಳಿದ್ದರು.