ಕಾಸರಗೋಡು, ಜೂ. 07(DaijiworldNews/SM): ರಾಜ್ಯದಲ್ಲಿ ಜೂ.16 ವರೆಗೆ ಲಾಕ್ ಡೌನ್ ವಿಸ್ತರಣೆಗೊಳಿಸಿ ಕೇರಳ ಸರಕಾರ ಆದೇಶ ನೀಡಿದೆ. ಈ ನಡುವೆ ಜೂ.12,13ರಂದು ಕಠಿಣ ನಿಯಂತ್ರಣಗಳ ಸಹಿತ ಸಂಪೂರ್ಣ ಲಾಕ್ ಡೌನ್ ಗೆ ತೀರ್ಮಾನಿಸಲಾಗಿದೆ.
ಕೋವಿಡ್ ಸೋಂಕು ನಿರೀಕ್ಷೆಗೂ ಮೀರಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದ್ದಾರೆ. ತಿರುವನಂತಪುರಂನಲ್ಲಿ ಸೋಮವಾರ ನಡೆದ ಅವಲೋಕನ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆ, ವಾಣಿಜ್ಯ ಬಳಕೆ ಅಗತ್ಯವಿರುವ ಕಚ್ಚಾ ವಸ್ತುಗಳು, ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಮಾರಾಟ ನಡೆಸುವ ಸಂಸ್ಥೆಗಳು ಇತ್ಯಾದಿಗಳಿಗೆ ಜೂ.16 ವರೆಗೆ ಕಾರ್ಯಾಚರಿಸಲು ಅನುಮತಿಯಿದೆ. ಬ್ಯಾಂಕ್ ಗಳು ಈಗಿರುವ ಕ್ರಮದಂತೆಯೇ ಸೋಮವಾರ, ಬುಧವಾರ, ಶುಕ್ರವಾರಗಳಂದು ಕಾರ್ಯಾಚರಿಸಲಿದೆ.
ಸ್ಟೇಷನರಿ, ಜುವೆಲ್ಲರಿ, ಪಾದರಕ್ಷೆಗಳು, ಶೋರೂಂ, ಬಟ್ಟೆ ಅಂಗಡಿಗಳು, ಕನ್ನಡಕಗಳು ಇತ್ಯಾದಿಗಳ ಅಂಗಡಿಗಳು ಜೂ.11ರಂದು ಒಂದು ದಿನ ಮಾತ್ರ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಸರಕಾರಿ, ಸಾರ್ವಜನಿಕ, ನಿಗಮ, ಕಮೀಷನ್ ಇತ್ಯಾದಿ ಸಂಸ್ಥೆಗಳು ಜೂ.17 ರಿಂದ ಶೇ 50 ಮಂದಿ ಸಿಬ್ಬಂದಿಯೊಂದಿಗೆ ಮಾತ್ರ ಚಟುವಟಿಕೆ ನಡೆಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವಾಕ್ಸಿನೇಷನ್ ಗೆ ಬೇಕಾದ ಸಹಾಯ ಒದಗಿಸಲಾಗುವುದು. ಆಯಾ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳನ್ನು ಲಸಿಕೆ ಚಟುವಟಿಕೆಗಳ ಸಾಲಿನಲ್ಲಿ ಅಳವಡಿಸುವಂತೆ ಮುಖ್ಯಮಂತ್ರಿ ಆದೇಶ ನೀಡಿದರು.
ವಾಹನ ಶೋರೂಂಗಳಲ್ಲಿ ಮೈಂಟೆನೆನ್ಸ್ ವರ್ಕ್ ಗಳಿಗೆ ಮಾತ್ರ ಜೂ.11ರಂದು ತೆರೆದು ಕಾರ್ಯಾಚರಿಸಬಹುದು. ಮಾರಾಟ ಸಹಿತ ಇತರ ಚಟುವಟಿಕೆ ಅನುಮತಿಯಿಲ್ಲ. ಹೈಕೋರ್ಟ್ ಆದೇಶ ಪ್ರಕಾರ ನ್ಯಾಯವಾದಿಗಳನ್ನು, ಅಲ್ಲಿನ ಇತರ ಸಿಬ್ಬಂದಿಯನ್ನು ಲಸಿಕೆ ಸ್ವೀಕಾರದಲ್ಲಿ ಆದ್ಯತೆಯ ಸಾಲಿನಲ್ಲಿ ಸೇರ್ಪಡೆಗೊಳಿಸಲಾಗುವುದು. ಖಾಸಗಿ ಬಸ್ ಸಿಬ್ಬಂದಿಯೂ ಈ ವಿಭಾಗದಲ್ಲಿರುವರು. ವಯೋವೃದ್ಧರ ವಾಕ್ಸಿನೇಷನ್ ಪ್ರಗತಿಯಲ್ಲಿದೆ. ಬಾಕಿಯಿರುವ ಮಂದಿಗೆ ಶೀಘ್ರ ಲಸಿಕೆ ನೀಡಲಾಗುವುದು ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.