ನವದೆಹಲಿ, ಜೂ.07 (DaijiworldNews/HR): ಜೂನ್ 21ರಿಂದ ಕೇಂದ್ರ ಸರ್ಕಾರದಿಂದಲೇ ಎಲ್ಲಾ ರಾಜ್ಯಗಳಿಗೆ ಉಚಿತ ಕೊರೊನಾ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು. ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ ಲಸಿಕೆ ವಿತರಣೆಯ ಪೂರ್ತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊರಲಿದ್ದು, ಮುಂದಿನ ಎರಡು ವಾರದಲ್ಲಿ ಆ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು" ಎಂದರು.
"ಅಂತಾರಾಷ್ಟ್ರೀಯ ಯೋಗ ದಿನವಾದ ಜೂ. 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು. ಬೇರೆ ವಯೋಮಾನದವರಿಗೆ ಈಗಾಗಲೇ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಯಾವುದೇ ಭೇದಭಾವ ಪರಿಗಣಿಸದೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು" ಎಂದಿದ್ದಾರೆ.
ಇನ್ನು "ಕಳೆದ ಬಾರಿ ಕೊರೊನಾ ಲಾಕ್ಡೌನ್ ಸಂಕಷ್ಟದ ಸಂದರ್ಭದಲ್ಲಿ 8 ತಿಂಗಳ ಕಾಲ ದೇಶದ ಜನರಿಗೆ ಉಚಿತವಾಗಿ ಆಹಾರಧಾನ್ಯ ವ್ಯವಸ್ಥೆ ಮಾಡಲಾಗಿದದು, ಅದೇ ರೀತಿ ಈ ವರ್ಷವೂ ಮೇ ಮತ್ತು ಜೂನ್ ತಿಂಗಳಲ್ಲಿ ಉಚಿತವಾಗಿ ಆಹಾರಧಾನ್ಯ ನೀಡಲಾಗುತ್ತಿದದು, ಜೊತೆಗೆ ಬಡವರು ಹಸಿವಿನಿಂದ ಮಲಗಬಾರದು. ಹಾಗಾಗಿ ದೇಶದ 80 ಕೋಟಿ ಜನರಿಗೆ ನವೆಂಬರ್ ವರೆಗೂ ಅಂದರೆ ದೀಪಾವಳಿವರೆಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡಲಾಗುವುದು" ಎಂದು ತಿಳಿಸಿದ್ದಾರೆ.