ಬೆಂಗಳೂರು, ಜೂ 07 (DaijiworldNews/MS): ಪಕ್ಷದ ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡಲು ಸಿದ್ಧ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಯಡಿಯೂರಪ್ಪ ಅವರ ಈ ಹೇಳಿಕೆ ಅವರ ಆಪ್ತ ವಲಯದಲ್ಲಿ ತಲ್ಲಣ ಮೂಡಿಸಿದೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಹೇಳಿಕೆ ಬಾಂಬ್ ಸಿಡಿಸುತ್ತಿದ್ದಂತೆ ಇದೀಗ ಸಚಿವರು, ಶಾಸಕರು ಸಿಎಂ ಕಾವೇರಿ ನಿವಾಸಕ್ಕೆ ದೌಡಾಯಿಸಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡುತ್ತಿದ್ದಾರೆ.
ನೀವು ಒಪ್ಪಿದರೆ ದೆಹಲಿಗೆ ಹೋಗಿ ಮುಖ್ಯಮಂತ್ರಿ ಬದಲಾವಣೆ ಮಾಡದಂತೆ ವರಿಷ್ಠರ ಮೇಲೆ ಒತ್ತಡ ಹೇರುವುದಾಗಿ ಯಡಿಯೂರಪ್ಪ ಬೆಂಬಲಿಗರು ತಿಳಿಸಿದ್ದಾರೆ. ಇನ್ನು ಕೇಂದ್ರ ನಾಯಕರು ಹಾಗೂ ರಾಜ್ಯಾಧ್ಯಕ್ಷರು, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡಿ ಕೆಣಕುತ್ತಿದ್ದ ವಿರೋಧಿ ಬಣ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ.
ಈಗಾಗಲೇ ಸಚಿವರಾದ ಭೈರತಿ ಬಸವರಾಜ್, ನಾರಾಯಣಗೌಡ, ಬಿ.ಶ್ರೀರಾಮುಲು, ಶಾಸಕರಾದ ರಘು, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದು, ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಸಿಎಂ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಎಲ್ಲಾ ರೀತಿಯ ಬೆಳವಣಿಗೆಗಳು ಪ್ರಾರಂಭವಾಗಿರುವುದು ಸ್ಪಷ್ಟ.