ನವದೆಹಲಿ, ಜೂ.07 (DaijiworldNews/HR): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿ ಬಳಿಕ ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟಿರುವ ವಜ್ರ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕರೆತರಲು ಪ್ರಯತ್ನ ನಡೆಸುತ್ತಿರುವುದ ನಡುವೆಯೇ, ಚೋಕ್ಸಿಯನ್ನು ಶೀಘ್ರವೇ ಡೊಮಿನಿಕಾವು ಭಾರತಕ್ಕೆ ಗಡಿಪಾರು ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ವರದಿಯಾಗಿದೆ.
ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಬೆಳವಣಿಗೆಯನ್ನು ಸರ್ಕಾರದ ಕಾನೂನು ತಜ್ಞರು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದಾಗಿ ಹೇಳಿದ್ದು, 2018ರ ಜನವರಿಯಿಂದ 2019ರ ಜುಲೈವರೆಗೆ ಬ್ರಿಟನ್ ನಿಂದ ಒಟ್ಟು 148 ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಲಾಗಿದ್ದು, ಅಕ್ರಮವಾಗಿ ಬ್ರಿಟನ್ ಪ್ರವೇಶಿಸಿದ್ದರಿಂದ ಇವರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು ಎಂದು ವರದಿ ಹೇಳಿದೆ.
ಇನ್ನು 2017ರಲ್ಲಿ ಚೋಕ್ಸಿ ಆಯಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದು, 2018ರಿಂದ ಅಲ್ಲೇ ವಾಸ್ತವ್ಯ ಹೂಡಿದ್ದರು, ಆದರೆ ಡೊಮಿನಿಕಾದ ಪೌರತ್ವ ಪಡೆಯದ ಕಾರಣ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ತನ್ನನ್ನು ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ‘ ಎಂದು ಚೋಕ್ಸಿ ತನ್ನ ವಕೀಲರ ಮೂಲಕ ಆಂಟಿಗುವಾ ಮತ್ತು ಬಾರ್ಬುಡಾದ ರಾಯಲ್ ಪೋಲಿಸರಿಗೆ ದೂರು ನೀಡಿದ್ದಾರೆ.
ಇನ್ನು ವಕೀಲರು ಸಲ್ಲಿಸಿರುವ ದೂರಿನ ಹಿನ್ನೆಲೆ ಆಂಟಿಗಾ ಮತ್ತು ಬರ್ಬುಡಾದ ರಾಯಲ್ ಪೊಲೀಸ್ ಪಡೆಯು ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ಗ್ಯಾಸ್ಟನ್ ಬ್ರೌನ್ ತಿಳಿಸಿದ್ದಾರೆ.
ಒಂದು ವೇಳೆ ವಕೀಲರು ಮಾಡುತ್ತಿರುವ ಆರೋಪ ನಿಜವಾಗಿದ್ದರೆ, ಈ ಪ್ರಕರಣವು ಗಂಭೀರ ಸ್ವರೂಪಕ್ಕೆ ತಿರುಗುತ್ತದೆ. ಇಡೀ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಾರೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.