ನವದೆಹಲಿ, ಜೂ 07 (DaijiworldNews/MS): ನವದೆಹಲಿಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದ್ದು ಎರಡು ತಿಂಗಳ ಬಳಿಕ ಮತ್ತೆ ಚಟುವಟಿಕೆಗಳು ಪುನರಾರಂಭಗೊಳ್ಳತೊಡಗಿದೆ.
ನಿರ್ಬಂಧ ಸಡಿಲಿಕೆ ಮಾಡುತ್ತಿದ್ದಂತೆ " ಜನರು ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಾವು ಕೊರೊನಾ ಸೋಂಕಿನಿಂದಲೂ ದೂರವಿರಬೇಕು. ಇದರೊಂದಿಗೆ ಆರ್ಥಿಕತೆಯನ್ನು ಸರಿ ದಾರಿಗೆ ತರಬೇಕು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಮನವಿ ಮಾಡಿದ್ದಾರೆ.
ಇಂದಿನಿಂದ ಶೇಕಡಾ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಮೆಟ್ರೋ ರೈಲು ಸೇವೆ ಶುರುವಾಗಿದೆ. ಮಾಲ್ಗಳು, ಮಾರುಕಟ್ಟೆಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಸಮ-ಬೆಸ ಆಧಾರದ ಮೇಲೆ ತೆರೆಯಲು ಅನುಮತಿ ನೀಡಲಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಎಲ್ಲ ಅಂಗಡಿಗಳು ಸಮ ಬೆಸ ಆಧಾರದ ಮೇಲೆ ಬಾಗಿಲು ತೆರೆಯಬಹುದಾಗಿದೆ. ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಉದ್ಯೋಗಿಗಳೊಂದಿಗೆ ಕೆಲಸ ಮಾಡಬಹುದಾಗಿದೆ. ಸರ್ಕಾರಿ ಕಚೇರಿಯಲ್ಲಿ ಎಲ್ಲಾ ಗ್ರೂಪ್ ಎ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಇತರ ವರ್ಗಗಳ ಶೇಕಡಾ 50 ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಲಿದ್ದಾರೆ.
ಇನ್ನು ದೆಹಲಿಯಲ್ಲಿ 381 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಎರಡೂವರೆ ತಿಂಗಳಿನಲ್ಲಿ ವರದಿಯಾದ ಅತಿ ಕಡಿಮೆ ಪ್ರಕರಣಗಳಾಗಿವೆ. ಇದೇ ವೇಳೆ 35 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಸೋಂಕು ದೃಢೀಕರಣ ಪ್ರಮಾಣವು ಶೇಕಡ 0.5ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ಭಾನುವಾರ ತಿಳಿಸಿದೆ.