ಬೆಂಗಳೂರು, ಜೂ.06 (DaijiworldNews/HR): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಶನಿವಾರ ಸರ್ಕಾರ ವರ್ಗಾವಣೆ ಮಾಡಿದ ಬೆನ್ನಲ್ಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ವರ್ಗಾವಣೆ ಮಾಡದಂತೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಎಸ್ವೈ ಹೇಳಿದ್ದಾರೆ ಎನ್ನಲಾಗಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅಹಂಕಾರಿ, ಯಾವುದೇ ಕೆಲಸ ಮಾಡೋದಕ್ಕೆ ಬಿಡೋದಿಲ್ಲ. ಇಂತಹ ಜಿಲ್ಲಾಧಿಕಾರಿ ಯಾರಿಗೂ ಬೇಡ ಎನ್ನುವ ಮೂಲಕ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವಾಗ್ದಾಳಿ ನಡೆಸಿದ್ದು, ಅಲ್ಲದೇ ಜಿಲ್ಲಾಧಿಕಾರಿಗಳ ಕಿರಿಕಿರಿಗೆ ಬೇಸತ್ತು, ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು.
ಇನ್ನು ಈ ಎಲ್ಲಾ ಬೆಳವಣಿಗೆಯ ಬಳಿಕ ಮೈಸೂರಿಗೆ ಆಗಮಿಸಿದ್ದಂತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು, ಜಿಲ್ಲಾಧಿಕಾರಿ ಹಾಗೂ ಆಯುಕ್ತೆಯೊಂದಿಗೆ ಮಾತು ಕತೆ ನಡೆಸಿದ್ದು, ಶನಿವಾರ ತಡ ರಾತ್ರಿ ರಾಜ್ಯ ಸರ್ಕಾರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ಮತ್ತು ಚಾರಿಟಬಲ್ ಎನ್ ರೋಲ್ಮೆಂಟ್ ನ ಕಮೀಷನರ್ ಆಗಿ ವರ್ಗಾವಣೆ ಮಾಡಿತ್ತು. ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಆರ್ಡಿಪಿಆರ್ ಇ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ರೋಹಿಣಿ ಸಿಂಧೂರಿ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಡಿಸಿ ವರ್ಗಾವಣೆಗೆ ತಡೆ ನೀಡಲು ಕೋರಿದ್ದರೆಂದು ಹೇಳಲಾಗುತ್ತಿದ್ದು, ಸಿಎಂ ಯಡಿಯೂರಪ್ಪ ಮಾತ್ರ ತಡೆಗೆ ನಕರಾ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.