ನವದೆಹಲಿ, ಜೂ.06 (DaijiworldNews/HR): ಮನೆ ಬಾಗಿಲಿಗೆ ಪಡಿತರ ವಿತರಣೆ ತಲುಪಿಸುವ ಯೋಜನೆಗೆ ಕೇಂದ್ರ ಸರ್ಕಾರ ಏಕೆ ತಡೆಯೊಡ್ಡುತ್ತಿದೆ ಎಂದು ಪ್ರಶ್ನಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೇಶದ ಹಿತಾಸಕ್ತಿಯ ದೃಷ್ಟಿಕೋನದಲ್ಲಿ ಆದಷ್ಟು ಬೇಗನೇ ಈ ಯೋಜನೆ ಅನುಷ್ಠಾನಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಆನ್ಲೈನ್ ಮೂಲಕ ಮಾತನಾಡಿರುವ ಅವರು, "ಕೊರೊನಾ ದೃಷ್ಟಿಯಿಂದ ದೇಶದಾದ್ಯಂತ ಈ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕು. ಇಲ್ಲದಿದ್ದರೆ ಪಡಿತರ ಅಂಗಡಿಗಳು 'ಸೂಪರ್ ಸ್ಪ್ರೆಡರ್' ಗಳಾಗಿ ಮಾರ್ಪಾಡುಗೊಳ್ಳಲಿವೆ. ಪಿಜ್ಜಾ, ಬರ್ಗರ್, ಸ್ಮಾರ್ಟ್ಫೋನ್ ಮತ್ತು ಬಟ್ಟೆಗಳನ್ನು ಮನೆಗಳಿಗೆ ತಲುಪಿಸಬಹುದಾದರೆ ಪಡಿತರವನ್ನು ಮನೆ ಬಾಗಿಲಿಗೆ ಏಕೆ ತಲುಪಿಸಬಾರದು" ಪ್ರಶ್ನಿಸಿದ್ದಾರೆ.
ಇನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲರ ವಿರುದ್ಧ ಹೋರಾಟಕ್ಕಿಳಿದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಸರ್ಕಾರಗಳು, ರೈತರು ಮತ್ತು ಲಕ್ಷದ್ವೀಪದ ಜನತೆ ಸೇರಿದಂತೆ ಎಲ್ಲರ ವಿರುದ್ಧವೂ ಕೇಂದ್ರ ಹೋರಾಟ ನಡೆಸುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆಯಿಂದ ಜನ ಸಾಮಾನ್ಯರು ಬೇಸರಗೊಂಡಿದ್ದಾರೆ. ನಾವು ಈ ರೀತಿ ಹೋರಾಡಿದರೆ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸಲು ಹೇಗೆ ಸಾಧ್ಯ" ಎಂದಿದ್ದಾರೆ.