ಬೆಂಗಳೂರು, ಜೂ.06 (DaijiworldNews/HR): ಕರ್ನಾಟಕದಲ್ಲಿ ಈವರೆಗೆ 1,784 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಬ್ಲ್ಯಾಕ್ ಫಂಗಸ್ ಸೋಂಕಿನ ಎಲ್ಲಾ ಜಿಲ್ಲಾವಾರು ಮಾಹಿತಿ ತರಿಸಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಈವರೆಗೆ 1,784 ಪ್ರಕರಣ ಕಂಡುಬಂದಿದೆ. ಇದರಲ್ಲಿ 1,564 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಒಬ್ಬ ಸೋಂಕಿತನಿಗೆ ಕನಿಷ್ಠ 2-3 ವಾರ ಚಿಕಿತ್ಸೆ ಬೇಕಾಗುತ್ತದೆ. ಸಂಪೂರ್ಣ ಗುಣಮುಖರಾಗಲು 5-6 ವಾರಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ. ಈಗಾಗಲೇ 62 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ 111 ಮಂದಿ ಮೃತಪಟ್ಟಿದ್ದಾರೆ" ಎಂದರು.
ಇನ್ನು ಬ್ಲ್ಯಾಕ್ ಫಂಗಸ್ ಸೋಂಕಿಗೆ ಅಂಪೊಟೆರಿಸಿನ್ ಬಿ ಔಷಧಿ ವಯಲ್ ಬೇಕಾಗಿದ್ದು, ಕೇಂದ್ರ ಸರ್ಕಾರವು 9,750 ವೈಲ್ ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಇದರಲ್ಲಿ 8,860 ವೈಲ್ ಶನಿವಾರ ಬಂದಿದೆ. ಒಟ್ಟು 18,650 ವಯಲ್ ಗಳು ರಾಜ್ಯಕ್ಕೆ ದೊರೆತಿದೆ. ಸರ್ಕಾರಿ ಆಸ್ಪತ್ರೆಗಳಿಗೆ 8,860 ವಯಲ್ ಗಳನ್ನು ಬಳಸಲಾಗಿದೆ. ಖಾಸಗಿ ಆಸ್ಪತ್ರೆಗಳು ಸೇರಿ ಬೇರೆ ಕಡೆಗಳಿಗೆ 9,740 ವಯಲ್ ನೀಡಲಾಗಿದೆ ಎಂದಿದ್ದಾರೆ.
ಬ್ಲ್ಯಾಕ್ ಫಂಗಸ್ನ ಚಿಕಿತ್ಸೆಗಾಗಿ ಮಧ್ಯಮ ವರ್ಗದವರು, ಬಡವರ್ಗದವರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಹಿಂದೆಯೇ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಒಬ್ಬರಿಗೆ 2 ರಿಂದ 3 ಲಕ್ಷ ರೂ. ಖರ್ಚಾಗಲಿದ್ದು, ಸರ್ಕಾರವೇ ಭರಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಉಚಿತವಾಗಿ ನೀಡಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಡಿ ಚಿಕಿತ್ಸೆ ನೀಡಬೇಕೆಂದು ಸಲಹೆ ಬಂದಿದ್ದು, ಈ ಕುರಿತು ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.