ನವದೆಹಲಿ, ಜೂ 05 (DaijiworldNews/MS): ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆಯ ಬ್ಲೂಟಿಕ್ ರದ್ದುಮಾಡಿ ,ವಿರೋಧ ವ್ಯಕ್ತವಾದ ಬಳಿಕ ಬ್ಲೂ ಟಿಕ್ ಸಕ್ರಿಯಗೊಳಿಸಿದ್ದ ಟ್ವಿಟ್ಟರ್ ಇದೀಗ ತನ್ನ ಬಳಕೆದಾರರಾಗಿರುವ ಅನೇಕ ಆರ್ಎಸ್ಎಸ್ ನಾಯಕರ ಖಾತೆಯ ಬ್ಲೂ ವೇರಿಫೈಡ್ ಮಾರ್ಕ್ ಅನ್ನು ತೆಗೆದುಹಾಕಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ , ಗೋಪಾಲ್ ಕೃಷ್ಣ, ಅರುಣ್ ಕುಮಾರ್, ಮತ್ತು ಮಾಜಿ ನಾಯಕರಾದ ಸುರೇಶ್ ಸೋನಿ ಮತ್ತು ಸುರೇಶ್ ಬಿ ಜೋಶಿ ಸೇರಿದಂತೆ ಪ್ರಮುಖ ಸಂಘ ನಾಯಕರ ಖಾತೆಯ ಬ್ಲೂ ಟಿಕ್ ಮಾರ್ಕ್ ತೆಗೆದಿದೆ.
ಟ್ವಿಟರ್ ನಿಯಮಗಳ ಪ್ರಕಾರ, ಖಾತೆಯು ದೀರ್ಘಕಾಲ ಖಾತೆಯೂ ನಿಷ್ಕ್ರಿಯವಾಗಿದ್ದರೆ, ಆಗ ಬ್ಲ್ಯೂ ಟಿಕ್ ಬ್ಯಾಡ್ಜ್ ಅನ್ನು ತೆಗೆದುಹಾಕಲಾಗುತ್ತದೆ. ಅದರಂತೆ 2019ರಲ್ಲಿ ತೆರೆಯಲಾಗಿರುವ ಮೋಹನ್ ಭಾಗವತ್ ಅವರ ಟ್ವಿಟರ್ ಖಾತೆಯಲ್ಲಿ 20.76 ಲಕ್ಷ ಫಾಲೋವರ್ಸ್ ಇದ್ದರೂ ಒಂದೇ ಒಂದು ಟ್ವೀಟ್ ಕೂಡ ಪೋಸ್ಟ್ ಆಗಿರಲಿಲ್ಲ
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಟ್ವಿಟರ್ ಖಾತೆ ಬ್ಯಾಡ್ಜ್ ತೆಗೆದಾಗ ಟ್ವಿಟರ್ ಇದೇ ಕಾರಣ ನೀಡಿತ್ತು. 2020ರ ಜುಲೈನಿಂದ ವೆಂಕಯ್ಯನಾಯ್ಡು ಅವರ ಟ್ವಿಟರ್ ಖಾತೆ ನಿಷ್ಕ್ರಿಯವಾಗಿತ್ತು ಎಂಬುದಾಗಿ ತಿಳಿಸಿತ್ತು.