ವಿಜಯಪುರ, ಜೂ.5(DaijiworldNews/HR): ಬಿ.ವೈ ವಿಜಯೇಂದ್ರ ಹೈಕಮಾಂಡ್ ಭೇಟಿಗೆ ಇಡಿ ತನಿಖೆ ಕಾರಣವಾಗಿದ್ದು, ತಮ್ಮ ವಿರುದ್ಧ ಮಾರಿಷಸ್ ಹಣಕಾಸಿನ ಹಗರಣದ ಕುರಿತು ಮೂರು ದಿನಗಳಿಂದ ಇಡಿ ನಡೆಸುತ್ತಿರುವ ತನಿಖೆಯಿಂದ ರಕ್ಷಣೆ ಪಡೆಯಲು ವಿಜಯೇಂದ್ರ ದೆಹಲಿ ನಾಯಕರ ದುಂಬಾಲು ಬಿದ್ದಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿ.ವೈ ವಿಜಯೇಂದ್ರ ಕೊರೊನಾ ನಿರ್ವಹಣೆ ಬಗ್ಗೆ ಹೈಕಮಾಂಡ್ ಶಹಬ್ಬಾಶ್ ಪಡೆಯಲು ದೆಹಲಿಗೆ ಹೋಗಿಲ್ಲ. ಬದಲಾಗಿ ಮಾರಿಷಸ್ ನಲ್ಲಿರುವ ಸಾವಿರಾರು ಕೋಟಿ ರೂ. ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಮೂರು ದಿನಗಳಿಂದ ಇಡಿ ತನಿಖೆ ನಡೆಸುತ್ತಿದೆ. ಪಿಐ ಮೋಟರ್ಸ್ ಎನ್ನುವ ಕಂಪನಿಗೆ ಹಣ ಹೇಗೆ ವರ್ಗಾವಣೆ ಆಯಿತು ಎಂದು ತನಿಖೆ ನಡೆಯುತ್ತಿರುವುದರಿಂದ ಅವರು ದೆಹಲಿಗೆ ಹೋಗಿದ್ದರು" ಎಂದಿದ್ದಾರೆ.
ಇನ್ನು "ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಯಾಕೆ ಕರೆಯುತ್ತಿಲ್ಲ. ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಮುಖ್ಯಮಂತ್ರಿಗಳಿಗೆ ಯಾಕೆ ಹೆದರಿಕೆ? ಯಡಿಯೂರಪ್ಪ ತಾವು ಇರಿಸಿಕೊಂಡಿರುವ ಮೂವರು ಹೊಗಳು ಬಟ್ಟರಿಂದ ಭವಿಷ್ಯದಲ್ಲಿ ಭಾರಿ ದೊಡ್ಡ ಅಪಾಯವಿದೆ. ಅವಮಾನಕರ ರೀತಿಯಲ್ಲಿ ರಾಜಕೀಯ ನಿವೃತ್ತಿ ಆಗುವ ಸ್ಥಿತಿ ಎದುರಾಗಲಿದೆ" ಎಂದು ಎಚ್ವರಿಸಿದ್ದಾರೆ.