ನವದೆಹಲಿ, ಜೂ.5(DaijiworldNews/HR): ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಹಂತ ಹಂತವಾಗಿ ಲಾಕ್ಡೌನ್ ತೆರವುಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಕುರಿತು ಆನ್ಲೈನ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾ ನಿರ್ಬಂಧ ಸಡಿಲಗೊಳಿಸಿ ಹೊರಡಿಸಿರುವ ಆದೇಶ ಸೋಮವಾರದಿಂದ ಜಾರಿಗೆ ಬರಲಿದ್ದು, ಆ ಪ್ರಕಾರ, ಶೇ 50ರ ಪ್ರಯಾಣಿಕರೊಂದಿಗೆ ಮೆಟ್ರೊ ರೈಲು ಸಂಚಾರ ಮಾಡಲಿದೆ. ಸರಿ-ಬೆಸ ಸಂಖ್ಯೆಯ ಆಧಾರದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್ಗಳು ತೆರೆಯಬೇಕೆಂದು ನಿಬಂಧನೆ ವಿಧಿಸಲಾಗಿದೆ" ಎಂದರು.
ಇನ್ನು ಸೋಮವಾರ ಬೆಳಿಗ್ಗೆ 5 ಗಂಟೆಗೆ ಕೊನೆಗೊಳ್ಳಬೇಕಿದ್ದ ದೆಹಲಿಯ ಲಾಕ್ಡೌನ್ ಅನ್ನು ಕೆಲವೊಂದು ನಿಯಮಗಳನ್ನು ಸಡಿಸಲಿಸುವುದರೊಂದಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ತೆರಯಲು ಅವಕಾಶ ನೀಡಲಿದ್ದು, ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ಬೆಸ-ಸಮ ಆಧಾರದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್ಗಳನ್ನು ತೆರೆಯಲು ಅವಕಾಶ ನೀಡಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.