ಬೆಂಗಳೂರು, ಜೂ. 04 (DaijiworldNews/SM): ರಾಜ್ಯದಲ್ಲಿ ಕೊರೋನಾ ಕಾರಣದಿಂದಾಗಿ ಶೈಕ್ಷಣಿಕ ವರ್ಷಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದೆ. ಕಳೆದ ವರ್ಷದ ಶೈಕ್ಷಣಿಕ ವರ್ಷಕ್ಕೆ ಕೋವಿಡ್ ಕರಿ ನೆರಳು ಚೆಲ್ಲಿದ್ದು, ಇದೀಗ ಮತ್ತೊಂದು ಶೈಕ್ಷಣಿಕ ವರ್ಷವೂ ಕೂಡ ಆತಂಕದ್ದಾಗಿದೆ. ಇದೀಗ ಈ ಬಾರಿಯ ಶೈಕ್ಷಣಿಕ ವರ್ಷ ಆರಂಭಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದು, ಜುಲೈ 1ರಿಂದ ಶಾಲೆಗಳು ಆರಂಭಗೊಳ್ಳಲಿವೆ ಎಂದು ಘೋಷಿಸಿದ್ದಾರೆ. ಆ ಮೂಲಕ ಶಾಲೆ ಆರಂಭದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು, ಶಾಲೆ ಆರಂಭದ ಮಾಹಿತಿ ನೀಡಿದ್ದಾರೆ. ಜುಲೈ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳಲಿದ್ದು, ಜೂನ್ 15ರಿಂದ ದಾಖಲಾತಿ ಶುರುವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಸದ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿದ್ದು, ಶಿಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ನಿಯಮಗಳನ್ನು ಶಿಕ್ಷಣ ಇಲಾಖೆ ಪ್ರಕಟಿಸಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದು, ಇದರ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಆನ್ ಲೈನ್ ಅಥವಾ ಭೌತಿಕ ತರಗತಿಗಳನ್ನು ನಡೆಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಇನ್ನು ಖಾಸಗಿ ಶಾಲೆಗಳು ಶುಲ್ಕ ಪಡೆಯುವ ವಿಚಾರ ಚರ್ಚೆಯಲ್ಲಿದ್ದು ಸದ್ಯ ಈ ವಿಚಾರ ಕೋರ್ಟ್ ನಲ್ಲಿದೆ. ಶೀಘ್ರವೇ ಇದರ ತೀರ್ಪು ಪ್ರಕಟಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ.