ಬೆಂಗಳೂರು, ಜೂ 4(DaijiworldNews/MS): ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಪಾಲಿಕೆ ಆಯುಕ್ತರ ನಡುವೆ ನಡೆಸುತ್ತಿರುವ ಹಾದಿ- ಬೀದಿ ಜಗಳ ನೋಡಿದರೆ, ರಾಜ್ಯದಲ್ಲಿ ಸರ್ಕಾರ ಅಸ್ಥಿತ್ವದಲ್ಲಿದಿಯೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಈ ಇಬ್ಬರು ಐಎಎಸ್ ಅಧಿಕಾರಿಗಳು ಇಷ್ಟೊಂದು ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತಾ ಸರ್ಕಾರಕ್ಕೆ ಮುಜುಗರ ಸೃಷ್ಟಿಸುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮಹಿಳಾ ಅಧಿಕಾರಿಗಳ ಜಗಳದಲ್ಲಿ ಜನಪ್ರತಿನಿಧಿಗಳು ಪರ ವಿರೋಧದ ಹೇಳಿಕೆಗಳನ್ನು ನೀಡಿ ತಮ್ಮ ಬಾಯಿ ಚಪಲ ತೀರಿಸಿ ಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹೀಗೆ ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದೆ ಪರಸ್ಪರ ಕಿತ್ತಾಡಿಕೊಂಡರೆ ಬೇರೆ ಬೇರೆ ಇಲಾಖೆಯಲ್ಲಿರುವವರು ನಾಳೆ ಇದೇ ಹಾದಿ ತುಳಿದರೆ ರಾಜ್ಯದ ಪರಿಸ್ಥಿತಿ ಏನಾಗಬಾರದು ಎಂದಿದ್ದಾರೆ.
ಕೂಡಲೇ ಸರ್ಕಾರ ಇಬ್ಬರೂ ಅಧಿಕಾರಿಗಳ ಬಾಯಿಗೆ ಬೀಗ ಹಾಕುವಂತಹ ಧೈರ್ಯವನ್ನಾದರೂ ತೋರಲಿ. ಇಲ್ಲದಿದ್ದರೆ, ನಾಳೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಮರ್ಯಾದೆ ಹರಾಜಾದರೆ ಅದಕ್ಕೆ ಈಗಿನ ಸರಕಾರವೇ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.
ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿಯ ಜೀವ ಬಲಿ ಪಡೆಯಲಾಯಿತು. ಅಂತಹದೇ ಪರಿಸ್ಥಿತಿ ಮೈಸೂರಿನಲ್ಲೂ ನಿರ್ಮಾಣವಾಗಿದೆ. ಅಮಾಯಕರನ್ನು ಬಲಿ ಪಡೆಯುವ ದೊಡ್ಡ ಅನಾಹುತ ಸಂಭವಿಸುವ ಮೊದಲು ಸರ್ಕಾರ ತನ್ನ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಅಧಿಕಾರಿಗಳಿಬ್ಬರ ನಡುವಣ ಸಂಘರ್ಷ ಐದಾರು ತಿಂಗಳಿಂದ ನಡೆಯುತ್ತಿದೆ. ಮುಖ್ಯಮಂತ್ರಿ ಅಥವಾ ಸರ್ಕಾರದ ದೌರ್ಬಲ್ಯದ ಕಾರಣದಿಂದಲೇ ಅಧಿಕಾರಿಗಳು ಸೂಪರ್ಮ್ಯಾನ್ ಗಳಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಜಟಾಪಟಿಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದಂತಿದೆ. ಮೂಡ ಕಮಿಷನರ್ 12 ಕೋಟಿ ರೂಪಾಯಿಗಿಂತ ಸಿ ಎಸ್ ಆರ್ ಎಫ್ ಹೆಚ್ಚು ಹಣದ ಲೆಕ್ಕ ಕೊಟ್ಟಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಆರೋಪಿಸಿದರೆ, 42 ಕೋಟಿ ರೂಪಾಯಿ ಮಿಗಿಲಾದ ಹಣದ ದುರ್ಬಳಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿರುದ್ಧ ಬಿಜೆಪಿ ಸಂಸದ ಅಬ್ಬರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಕೋಟ್ಯಂತರ ರೂಪಾಯಿಗಳ ಆವ್ಯವಹಾರದ ಕಡು ಭ್ರಷ್ಟಾಚಾರದ ವಾಸನೆ ಗಬ್ಬೆದ್ದು ನಾರುತ್ತಿದ್ದರೂ ಸರ್ಕಾರ ಕಂಡು ಕಾಣದಂತೆ ವರ್ತಿಸುತ್ತಿರುವುದರ ಮರ್ಮವೇನು ಇದು ಮುಖ್ಯಮಂತ್ರಿಯ ದೌರ್ಬಲ್ಯವೋ? ಸರ್ಕಾರದ ಉನ್ನತ ಅಧಿಕಾರಿಗಳ ದೌರ್ಬಲ್ಯವೋ? ಯಾರನ್ನು ಓಲೈಸಲು ಅಥವಾ ದೌರ್ಬಲ್ಯ ಮುಚ್ಚಿಕೊಳ್ಳಲು ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ?ಸರ್ಕಾರಕ್ಕೇನಾದರೂ ಕಿಂಚಿತ್ತು ಮಾನ ಮರ್ಯಾದೆ ಇದೆಯೇ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.