ನವದೆಹಲಿ, ಜೂ.04 (DaijiworldNews/HR): 43,000 ಕೋಟಿ ವೆಚ್ಚದಲ್ಲಿ ಭಾರತೀಯ ನೌಕಾಪಡೆಗಾಗಿ 6 ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಬೃಹತ್ ಯೋಜನೆಗೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
ಚೀನಾದ ಪರಾಕ್ರಮವು ನೌಕಾ ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಅದರ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿದೆ.
ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
'ಮೇಕ್ ಇನ್ ಇಂಡಿಯಾ' ಭಾಗವಾಗಿ 'ಪಿ-75 ಇಂಡಿಯಾ' ಯೋಜನೆಯ ಪ್ರಸ್ತಾವನೆಗೆ ಕೋರಿಕೆ ಶೀಘ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.