ಬೆಂಗಳೂರು, ಜೂ 4(DaijiworldNews/MS): ಕೋವಿಡ್ ಹಿನ್ನೆಲೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ, ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆಯ ನಿರ್ಧಾರ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆತ್ತಿಕೊಂಡ ಅವರು, " ಸರ್ಕಾರ ತಕ್ಷಣ ಇಂತಹ ಮತಿ ಹೀನ ನಿರ್ಧಾರದಿಂದ ಹಿಂದೆ ಸರಿಯಬೇಕು.ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ. ಎಸ್ ಎಸ್ ಎಲ್ ಸಿ ಮಕ್ಕಳಿಗೆ ಸೀಮಿತ ವಿಷಯಗಳ ಪರೀಕ್ಷೆ ಎಂಬ ಮೊಂಡುತನವನ್ನು ಸರ್ಕಾರ ಕೈಬಿಡಬೇಕು. ಮತಿಗೆಟ್ಟಂತೆ ವರ್ತಿಸುತ್ತಿರುವ ಶಿಕ್ಷಣ ಸಚಿವರ ಐಲು-ಪೈಲು ನಿರ್ಧಾರ ಕಂಡು ರಾಜ್ಯದ ಜನತೆ ಹಾದಿ ಬೀದಿಯಲ್ಲಿ ನಗಾಡುವಂತಾಗಿದೆ ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ತೆಗೆದು ಕೊಂಡಿರುವುದಕ್ಕೆ ಮುಖ್ಯಮಂತ್ರಿಗಳು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಎಸೆಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಏಕರೂಪ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಬೇಕು. ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ ಎಂದಾದರೆ ಅದು ಅವರಿಗಿಂತ ಕಿರಿಯರಾದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೂ ಅನ್ವಯಿಸಬೇಕು. ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿದ್ದಕ್ಕೆ ಪ್ರಧಾನಮಂತ್ರಿಯ 'ಗುಮ್ಮ' ಕಾರಣ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಬೃಹಸ್ಪತಿ ಶಿಕ್ಷಣ ಸಚಿವರೋ? ಪೋಷಕರು, ವಿದ್ಯಾರ್ಥಿಗಳ ತಾಳ್ಮೆ ಕೆಣಕುವ ಪರೀಕ್ಷಾ ಮಂತ್ರಿಯೋ ? ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವಿಷಯದಲ್ಲಿ ಮೌನಿ ಆಗಿರುವ ಶಿಕ್ಷಣ ಸಚಿವರು ಬಿಸಿ ಊಟ ಸಿಗದೆ ಕಂಗಾಲಾಗಿರುವ ಬಡ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ಪರೀಕ್ಷೆಯಲ್ಲಿ ಪಾಸಾಗುವ ಏಳೆಂಟು ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನಾಯಸವಾಗಿ ಸೀಟು ದಕ್ಕಿಸಿಕೊಳ್ಳಲು ವ್ಯವಸ್ಥೆ ಮಾಡುವ ಕಡೆ ಚಿತ್ತ ಹರಿಸಲಿ ಎಂದು ಸಲಹೆ ನೀಡಿದ್ದಾರೆ.