ಮೈಸೂರು, ಜೂ 4(DaijiworldNews/MS): ಜಿಲ್ಲಾಧಿಕಾರಿಗಳ ಕಿರುಕುಳ ಸಹಿಸಲು ಸಾಧ್ಯವಿಲ್ಲ ಎಂದು ಐಎಎಸ್ ಅಧಿಕಾರಿ, ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಗುರುವಾರ ಐಎಎಸ್ ಹುದ್ದೆಗೇ ರಾಜೀನಾಮೆ ಸಲ್ಲಿಸಿದ್ದೇನೆ ಎಂಬ ಹೇಳಿಕೆಯ ಬಳಿಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಒತ್ತಡ ಹೆಚ್ಚಾಗಿದ್ದು, ಮೈಸೂರಿನ ಬಹುತೇಕ ಜನಪ್ರತಿನಿಧಿಗಳು ಸಾಮೂಹಿಕವಾಗಿ ತಿರುಗಿಬಿದ್ದಿದ್ದಾರೆ.
ಇನ್ನೊಂದೆಡೆ ಐಎಎಸ್ ಅಧಿಕಾರಿಗಳಿಬ್ಬರ ಸಂಘರ್ಷ ಹಾಗೂ ಜನಪ್ರತಿನಿಧಿಗಳ ಆಕ್ರೋಶದ ಬೆನ್ನಲ್ಲೇ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಇನ್ನೆರಡು ದಿನ ಕಾದು ನೋಡಿ, ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ
ರೋಹಿಣಿ ಸಿಂಧೂರಿ ಮೈಸೂರಿಗೆ ಕಾಲಿಟ್ಟ ದಿನದಿಂದಲೂ ಶಾಸಕ ಸಾ.ರಾ. ಮಹೇಶ್ ಆರೋಪ ಮಾಡುತ್ತಲೇ ಬಂದಿದ್ದರು. ಆ ಬಳಿಕ ಹುಣಸೂರು ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ 'ಮೈಸೂರಿನ ಎರಡನೇ ಮಹಾರಾಣಿ' ಎಂದು ಮೂದಲಿಸಿದ್ದರು. ಇದಾದ ಬಳಿಕ ಸಂಸದ ಪ್ರತಾಪ್ ಸಿಂಹ ಕೂಡಾ ಸಿಂಧೂರಿ ವಿರುದ್ದ ಸಿಡಿಮಿಡಿಗೊಂಡಿದ್ದರು.
ಇದೀ ಶಿಲ್ಪಾನಾಗ್ ರಾಜೀನಾಮೆ ಬೆನ್ನಲ್ಲೇ ವರ್ಗಾವಣೆಗೆ ಮತ್ತಷ್ಟು ಒತ್ತಡ ಹೆಚ್ಚಾಗಿದೆ. ಆಯುಕ್ತೆ ಹಾಗೂ ಜಿಲ್ಲಾಧಿಕಾರಿಗಳ ನಡುವೆ ಶೀತಲ ಸಮರದ ನಡುವೆ ಪಾಲಿಕೆ ಸದಸ್ಯರು ಆಯುಕ್ತೆ ಶಿಲ್ಪಾ ನಾಗ್ ಅವರ ಬೆಂಬಲಕ್ಕೆ ನಿಂತಿದ್ದು, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ರಾಜೀನಾಮೆಯನ್ನು ಒಪ್ಪಿಕೊಳ್ಳಬಾರದು ಎಂಬುದಾಗಿ ಆಗ್ರಹಿಸಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡುವಂತೆಯೂ ಒತ್ತಾಯಿಸುತ್ತಿದ್ದಾರೆ.