ಭೋಪಾಲ್, ಜೂ.04 (DaijiworldNews/HR): ಮುಷ್ಕರ ಕೈಬಿಟ್ಟು 24 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಸುಮಾರು 3000 ಕಿರಿಯ ವೈದ್ಯರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಭಟನೆಯನ್ನು ಮುಂದುವರಿಸುವುದಾಗಿ ತಿಳಿಸಿರುವ ಕಿರಿಯ ವೈದ್ಯರು, ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ಇನ್ನು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಕಾನೂನು ಬಾಹಿರ ಎಂದು ಹೈಕೋರ್ಟ್ ತಿಳಿಸಿತ್ತು.
ಮಧ್ಯಪ್ರದೇಶದ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 3 ಸಾವಿರ ಕಿರಿಯ ವೈದ್ಯರು ತಮ್ಮ ರಾಜೀನಾಮೆಯನ್ನು ಆಯಾ ಮೆಡಿಕಲ್ ಕಾಲೇಜುಗಳ ಡೀನ್ ಗೆ ಸಲ್ಲಿಸಿದ್ದಾರೆ ಎಂದು ಮಧ್ಯಪ್ರದೇಶದ ಕಿರಿಯ ವೈದ್ಯರ ಸಂಘದ(ಎಂಪಿಜೆಡಿಎ) ಅಧ್ಯಕ್ಷ ಡಾ.ಅರವಿಂದ್ ಮೀನಾ ತಿಳಿಸಿರುವುದಾಗಿ ವರದಿಯಾಗಿದೆ.
ಮೇ.31ರಿಂದ ಪ್ರತಿಭಟನೆ ಆರಂಭವಾಗಿದ್ದು, ತಮ್ಮ ಬೇಡಿಕೆ ಈಡೇರುವವರೆಗೂ ಮುಂದುವರಿಯಲಿದೆ ಎಂದು ಕಿರಿಯ ವೈದ್ಯರುಗಳು ತಿಳಿಸಿದ್ದಾರೆ.