ಬೆಂಗಳೂರು,ಜೂ 4(DaijiworldNews/MS): ರಾಜ್ಯದಲ್ಲಿ 2021ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ಈ ಬಾರಿ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಆದರೆ ಪರೀಕ್ಷೆ ಮಾದರಿಯನ್ನು ಬದಲಿಸಿ ನಡೆಸಲಾಗುವುದು ವಿಜ್ಞಾನ, ಸಮಾಜ ಗಣಿತ ಐಚ್ಚಿಕ ಬಾಷೆಗಳಿಗೆ ಒಂದೇ ಪರೀಕ್ಷೆ ಇರಲಿದ್ದು, ಪ್ರಶ್ನೆಗಳಿಗೆ ಬಹು ಆಯ್ಕೆಯ ಉತ್ತರಗಳ ಪ್ರಶ್ನೆಪತ್ರಿಕೆ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇನ್ನು ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುವುದು. ಈ ವರ್ಷ ಪೂರಕ ಪರೀಕ್ಷೆ ಇರುವುದಿಲ್ಲ. ಆದರೆ ಕೊರೊನಾ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ. ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರತಿ ಸಬ್ಜೆಕ್ ಗೆ 40 ಅಂಕಗಳು. 120 ಅಂಕಗಳಿಗೆ ನಡೆಯುತ್ತಿರುವಂತ ಪರೀಕ್ಷೆಗೆ ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಪ್ರಶ್ನೆ ಸರಳ, ನೇರವಾಗಿರುತ್ತದೆ. ಯಾವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದಂತ ಪ್ರಶ್ನೆಗಳನ್ನು ನೀಡಲಾಗುತ್ತದೆ.
ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್, ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುವುದು. ಸರಳ ಹಾಗೂ ನೇರ ಪ್ರಶ್ನೆಗಳಿರಲಿವೆ. ಇನ್ನೊಂದು ಪತ್ರಿಕೆ ಭಾಷಾ ವಿಷಯಗಳು ಇರಲಿವೆ.ಇದಲ್ಲದೆ ಎಸ್ಎಸ್ಎಲ್ಸಿಗೂ ಗ್ರೇಡ್ ಆಧಾರಿತ ಅಂಕ ನೀಡಲಾಗುವುದು. ಎ, ಎ ಪ್ಲಸ್ ಮಾದರಿಯಲ್ಲಿ ಗ್ರೇಡ್ ವ್ಯವಸ್ಥೆ ಇರಲಿದೆ.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಯಾರನ್ನೂ ಅನುತೀರ್ಣ ಮಾಡುವುದಿಲ್ಲ. ಈ ಬಾರಿ ನಡೆಸಲಾಗುವ ಪರೀಕ್ಷೆಯ ಮೊದಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ನಾವು ಪ್ರಕಟಿಸುತ್ತೇವೆ. ಅದನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಿ. ಮಾದರಿ ವದಲಾಗಿದೆ ಎಂದು ಒತ್ತಡವಾಗಲಿ, ಆತಂಕವಾಗಲೀ ಬೇಡ. ಅತ್ಯಂತ ಸರಳ ಹಾಗೂ ನೇರ ಪ್ರಶ್ನೆಗಳನ್ನಷ್ಟೇ ಕೇಳಲಾಗುವುದು. ಒಂದು ಡೆಸ್ಕ್ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಒಂದು ಕೊಠಡಿಯಲ್ಲಿ ಕೇವಲ 10 ರಿಂದ 12 ವಿದ್ಯಾರ್ಥಿಗಳು ಮಾತ್ರ ಇರಲಿದ್ದಾರೆ. ಪರೀಕ್ಷೆ ಬರೆಯುವ ಎಲ್ಲರಿಗೂ N95 ಮಾಸ್ಕ್ ನೀಡುತ್ತೇವೆ. ಮಾದರಿ ಪ್ರಶ್ನೆಪತ್ರಿಕೆ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಆಗಿದೆ. ವೆಬ್ಸೈಟ್ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಹಾಕಲಾಗುವುದು. ಎಸೆಸೆಲ್ಸಿಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪರೀಕ್ಷೆಯ ಫಲಿತಾಂಶ ವನ್ನೂ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು. ಇವೆಲ್ಲವೂ ಸದ್ಯದ ತೀರ್ಮಾನವಾಗಿದ್ದು, ಇದೇ ಅಂತಿಮವಲ್ಲ, ಕೊರೊನಾ ನಿಯಂತ್ರಣದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.