ಬೆಂಗಳೂರು, ಜೂ 4(DaijiworldNews/MS): ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಸದ್ಯಕ್ಕೆ ನಡೆಸಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಸಚಿವ ಸುರೇಶ್ ಕುಮಾರ್, ಈ ವರ್ಷ ಪರೀಕ್ಷೆ ನಡೆಸಲು ಇಲಾಖೆಯೂ ಎಲ್ಲಾ ರೀತಿಯ ಸಿದ್ದತೆ ನಡೆಸಲಾಗಿತ್ತು ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳು ಮಾತ್ರವಲ್ಲದೆ, ಮುಖ್ಯಮಂತ್ರಿಗಳು, ಶಾಸಕ, ಸಚಿವರು ಸೇರಿ ಪ್ರಮುಖ ಜನಪ್ರತಿನಿಧಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿ ಸುದೀರ್ಘ ಚರ್ಚೆ ನಡೆಸಿ’ ಮಕ್ಕಳ ಯೋಗಕ್ಷೇಮದ ಮತ್ತು ಶೈಕ್ಷಣಿಕ ಭವಿಷ್ಯದ ಬಗ್ಗೆ ವಿಸ್ತೃತ್ತ ಚಿಂತನೆ ನಡೆಸಿ ಸದ್ಯಕ್ಕೆ ದ್ವಿತೀಯ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಗಳನ್ನು ಪ್ರಥಮ ಪಿಯುಸಿ ಪರೀಕ್ಷೆಯನ್ನು ಜಿಲ್ಲಾ ಮಟ್ಟದ ಪರೀಕ್ಷೆಯಾಗಿ ಎದುರಿಸಿದ್ದರು. ಆ ಆಧಾರದ ಮೇಲೆ ಪರೀಕ್ಷೆಯಿಲ್ಲದೇ ಈ ಬಾರಿ, ಆ ಅಂಕಗಳ ಆಧಾರದ ಮೇಲೆ ನಾವು ಒಂದಷ್ಟು ಮಾನದಂಡಗಳನ್ನು ಇಟ್ಟುಕೊಂಡು, ಪಿಯು ಇಲಾಖೆ ಅವುಗಳನ್ನು ಬಿಡುಗಡೆ ಮಾಡಲಿದೆ. ಅದರ ಆಧಾರದ ಮೇಲೆ ಗ್ರೇಡ್ ಮಾಧರಿಯಲ್ಲಿ ಪಾಸ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು "ವಿದ್ಯಾರ್ಥಿಗಳಿಗೆ ಎ, ಎ+, ಬಿ, ಬಿ+ ಎಂಬಂತೆ ಗ್ರೇಡ್ ನೀಡಲಾಗುವುದು. ಯಾವುದೇ ವಿದ್ಯಾರ್ಥಿ ತನಗೆ ಸಿಕ್ಕ ಗ್ರೇಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ತೃಪ್ತಿ ಇಲ್ಲ ಎಂದರೆ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಕೊರೊನಾ ಬಿಕ್ಕಟ್ಟು ಮುಗಿದ ನಂತರ ಪರೀಕ್ಷೆ ನಡೆಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಜೂನ್ 23 ಇಲ್ಲವೇ 24 ರಂದು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ಅಫೆಕ್ಟ್ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ವಿಭಿನ್ನ ನಿಲುವು ವ್ಯಕ್ತವಾಗುತ್ತಿದೆ. ಆದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕೋ ಎಂಬ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.