ಬೆಂಗಳೂರು, ಜೂ 4(DaijiworldNews/MS): ರಾಜ್ಯದಲ್ಲಿ ಎಸ್ಎಸ್ಎಲ್'ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
ಕೇಂದ್ರ ಮಟ್ಟದ ಸಿಬಿಎಸ್'ಇ ಮತ್ತು ಐಸಿಎಸ್'ಇ ಯ 10 ನೇ ಮತ್ತು 12 ನೇ ತರಗತಿ ಪರೀಕ್ಷೆಗಳು ರದ್ದಾಗಿರುವ ಕಾರಣ ರಾಜ್ಯದಲ್ಲಿ ಪರೀಕ್ಷೆಗಳ ಬಗ್ಗೆ ಇಂದು ನಿರ್ಧಾರಕ್ಕೆ ಬರಲಿದ್ದಾರೆ.
ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳು ಮಾತ್ರವಲ್ಲದೆ, ಮುಖ್ಯಮಂತ್ರಿಗಳು, ಶಾಸಕ, ಸಚಿವರು ಸೇರಿ ಪ್ರಮುಖ ಜನಪ್ರತಿನಿಧಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿ ಸುದೀರ್ಘ ಚರ್ಚೆ ನಡೇಸಿರುವ ಸುರೇಶ್ ಕುಮಾರ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
2020-21ನೇ ಸಾಲಿನಲ್ಲಿ ಕೊರೊನಾ ಕಾರಣದಿಂದ ಸಮರ್ಪಕವಾಗಿ ಪಠ್ಯ ಬೋಧನೆ ನಡೆದಿಲ್ಲ. ಅದರಲ್ಲೂ ಇಂಟರ್ನೆಟ್, ಆನ್'ಲೈನ್ ಶಿಕ್ಷಣ ಸೌಲಭ್ಯಗಳೂ ಇಲ್ಲದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೀವ್ರ ನಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಎಸ್ಎಸ್ಎಲ್'ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವುದು ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.