ಕಾಸರಗೋಡು, ಜೂ. 03 (DaijiworldNews/SM): ಕೇರಳದಲ್ಲಿ ಜೂನ್ 5ರಿಂದ 9ರ ತನಕ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಜಾರಿಗೆ ತರಲು ಸರಕಾರ ತೀರ್ಮಾನಿಸಿದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಈಗ ನೀಡಿರುವ ರಿಯಾಯಿತಿ ಜೂನ್ 4ರ ಸಂಜೆ 7 ಗಂಟೆ ತನಕ ಅನುಮತಿ ನೀಡಲಾಗಿದೆ. ಜೂನ್ 5 ರಿಂದ 9ರ ತನಕ ಇವುಗಳಿಗೆ ಅನುಮತಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳು, ಉದ್ದಿಮೆಗಳಿಗೆ ಅಗತ್ಯ ಇರುವ ವಸ್ತುಗಳ ಮಾರಾಟ ಮಳಿಗೆ, ನಿರ್ಮಾಣ ಸಾಮಾಗ್ರಿ ಮಾರಾಟ ಮಳಿಗೆಗಳಿಗೆ ಮಾತ್ರ ಜೂನ್ 9ರ ತನಕ ತೆರೆಯಲು ಅನುಮತಿ ನೀಡಲಾಗಿದೆ.
ಸರಕಾರಿ, ಸಾರ್ವಜನಿಕ ವಲಯ ಸಂಸ್ಥೆ, ನಿಗಮಗಳು ಮೊದಲಾದವು ಶೇಕಡಾ 50ರಷ್ಟು ಸಿಬ್ಬಂದಿಗಳೊಂದಿಗೆ ಜೂನ್ 10ರ ಬಳಿಕ ಕಾರ್ಯಾಚರಿಸಬಹುದಾಗಿದೆ. ಈ ಹಿಂದೆ ಜೂನ್ 7ರ ಬಳಿಕ ಅನುಮತಿ ನೀಡಲಾಗಿತ್ತು. ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಕೋವಿಡ್ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ಗಡಿ ಪ್ರದೇಶದ ಸಂಪರ್ಕ ಹೊಂದಿರುವ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯವರಿಗೆ ವ್ಯಾಕ್ಸಿನೇಷನ್ ನೀಡಲಾಗುವುದು.