ಮಂಡ್ಯ, ಜೂ.03 (DaijiworldNews/HR): ಸರ್ಕಾರವು ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿದ್ದು, ಲಾಕ್ಡೌನ್ ಅವಧಿಯಲ್ಲಿ ಮದ್ಯಮಾರಾಟದಿಂದ ದಾಖಲೆಯ ಆದಾಯಗಳಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಆರೊಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮದ್ಯಮಾರಾಟದಿಂದ 3,650 ಕೋಟಿ ರೂಪಾಯಿ ಅಬಕಾರಿ ಆದಾಯಗಳಿಕೆಯಾಗಿದ್ದು, ಕಳೆದ ವರ್ಷ 1,404.08 ಕೋಟಿ ಆದಾಯ ಗಳಿಸಲಾಗಿತ್ತು. ಖಜಾನೆಯಲ್ಲಿ ಸಾಕಷ್ಟು ಹಣವಿದ್ದರೂ ಜನರಿಗೆ ಲಸಿಕೆ ಒದಗಿಸಲು ರಾಜ್ಯಸರ್ಕಾರಕ್ಕೆ ಸಾಧ್ಯವಾಗಿಲ್ಲ" ಎಂದರು.
ಇನ್ನು "ಕಾಂಗ್ರೆಸ್ ಪಕ್ಷವು ಲಸಿಕೆಗಳನ್ನು ನೇರವಾಗಿ ಖರೀದಿಸಿ, ವಿತರಿಸಲು ಸರ್ಕಾರವು ಅನುಮತಿ ನೀಡಬೇಕು. ಯೋಜನೆ ಹಾಗೂ ಸಂಪನ್ಮೂಲಗಳನ್ನು ಹೊಂದಿಸಿಕೊಂಡು ರಾಜ್ಯಾದ್ಯಂತ ಲಸಿಕಾ ಅಭಿಯಾನ ನಡೆಸಲು ನಾವು ಸಿದ್ಧರಿದ್ದೇವೆ" ಎಂದಿದ್ದಾರೆ.
"ತಮ್ಮ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಸರ್ಕಾರವೇ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.