ಬೆಂಗಳೂರು, ಜೂ.03 (DaijiworldNews/HR): ಕನ್ನಡವೊಂದೇ ಅಲ್ಲ, ಯಾವ ಭಾಷೆಯೂ ಕೆಟ್ಟ, ಕುರೂಪವಲ್ಲ. ಎಲ್ಲ ಭಾಷೆಗಳೂ ಸುಂದರವೇ. ಭಾಷೆ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಭಾಷೆ ವಿರುದ್ಧ ನಿಂದನೆ ಬಹಳ ನೋವಿನದ್ದು. ಹೀಗಾಗಿ ಈ ವಿಚಾರದಲ್ಲಿ ಗೂಗಲ್ ಸೂಕ್ಷ್ಮವಾಗಿರಬೇಕು. ಕನ್ನಡವನ್ನು ಅವಹೇಳನ ಮಾಡಿದ್ದ ವೆಬ್ಪುಟ ಡಿಲಿಟ್ ಆಗಿರಬಹುದು. ಆದರೆ ಅದರಿಂದ ಕನ್ನಡಿಗರಿಗಾದ ನೋವಿಗೇನು ಪರಿಹಾರ? ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಭಾಷೆ ವಿಚಾರದಲ್ಲಿ ಗೂಗಲ್ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? ಅಗ್ಲಿ ಲಾಂಗ್ವೇಜ್(ಕೊಳಕು ಭಾಷೆ ) ಆಫ್ ಇಂಡಿಯಾ ಎಂಬ ಹುಡುಕಾಟಕ್ಕೆ 'ಕನ್ನಡ' ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು ಗೂಗಲ್ ಗೆ ಅಸಾಧ್ಯವೇ?" ಎಂದರು.
ಇನ್ನು ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ. ಭಾಷೆ ವಿಚಾರದಲ್ಲಿ ಯಾರೇ ಅದರೂ ಇನ್ನು ಮುಂದೆ ಎಚ್ಚರವಾಗಿರಬೇಕು. ಅದರಲ್ಲೂ ಕನ್ನಡದ ವಿಚಾರದಲ್ಲಂತೂ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ, ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ" ಎಂದು ಹೇಳಿದ್ದಾರೆ.
ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ ಎಂಬುದಾಗಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖಿಸಿದ್ದಾರೆ.