ನವದೆಹಲಿ, ಜೂ 3 (DaijiworldNews/MS): ಗೌತಮ್ ಗಂಭೀರ್ ಫೌಂಡೇಶನ್, ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಕೆ ಅತ್ಯಾವಶ್ಯಕ ಔಷಧಿಗಳ ಅನಧಿಕೃತ ದಾಸ್ತಾನು ಹಾಗೂ ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ದೋಷಿ ಎಂದು ದೆಹಲಿ ಹೈಕೋರ್ಟ್ಗೆ ದೆಹಲಿ ಸರ್ಕಾರದ ಔಷಧ ನಿಯಂತ್ರಕ ಗುರುವಾರ ತಿಳಿಸಿದೆ.
ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ಅತ್ಯಾವಶ್ಯಕ ಫ್ಯಾಬಿ ಫ್ಲೂ ಮಾತ್ರೆಗಳನ್ನು ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಸಂಗ್ರಹಿಸಿ ವಿತರಣೆ ಮಾಡಿತ್ತು. ಈ ವಿಚಾರ ದೆಹಲಿ ಹೈಕೋರ್ಟ್ ಗಮನಕ್ಕೆ ಬಂದು ದೇಶಾದ್ಯಂತ ಕೊವೀಡ್ ಔಷಧಗಳು ತೀವ್ರ ಕೊರತೆ ಇರುವಾಗ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಮಾತ್ರ ಹೇರಳವಾಗಿ ಈ ಔಷಧಿಗಳನ್ನು ಸಂಗ್ರಹಿಸಿದ್ದು ಹೇಗೆ..? ಇದಕ್ಕೆ ಯಾವ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ದೆಹಲಿಯ ಔಷಧ ನಿಯಂತ್ರಕರನ್ನು ಪ್ರಶ್ನಿಸಿತ್ತು.
ಈ ಸಂಬಂಧ ಕೋರ್ಟ್ ಗೆ ವರದಿ ನೀಡಿದ್ದ ದೆಹಲಿಯ ಔಷಧ ನಿಯಂತ್ರಕ ಇಲಾಖೆ, ಗೌತಮ್ ಗಂಭೀರ್ ಫೌಂಡೇಷನ್ ಅಕ್ರಮವಾಗಿ ಔಷಧಿಗಳನ್ನು ಸಂಗ್ರಹಿಸಿ ವಿತರಣೆ ಮಾಡಿತ್ತು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಅಲ್ಲದೆ ಇಂತಹ ಪ್ರಕರಣಗಳು ಕಂಡುಬಂದರೆ ಮಾಹಿತಿ ನೀಡುವಂತೆ ಔಷಧ ಡೀಲರ್ ಗಳಿಗೆ ಸೂಚಿಸಲಾಗಿದೆ ಎಂದು ಹೇಳಿದೆ.
ಹೈಕೋರ್ಟ್ ಆರು ವಾರಗಳಲ್ಲಿ ಪ್ರಕರಣದ ಹೆಚ್ಚಿನ ಪ್ರಗತಿಯ ಕುರಿತು ಸ್ಥಿತಿ ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಔಷಧ ನಿಯಂತ್ರಕ ಪ್ರಾಧಿಕಾರವನ್ನು ಹೇಳಿ ಜುಲೈ 29ಕ್ಕೆ ವಿಚಾರಣೆ ಮುಂದೂಡಿದೆ.