ನವದೆಹಲಿ, ಜೂ.03 (DaijiworldNews/HR): ಕೊರೊನಾ ತಡೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಸರಿಪಡಿಸಲಾಗದಂತೆ ಯೋಗ ಗುರು ರಾಮದೇವ್ ಅವರು ಹಾನಿ ಮಾಡುತ್ತಿದ್ದು, ಇಂತಹ ಸೂಕ್ಷ್ಮ ಸಮಯದಲ್ಲಿ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜನಸಾಮಾನ್ಯರಿಗಾಗಿ ಪತ್ರವೊಂದನ್ನು ಬರೆದಿದ್ದು, "ರಾಮದೇವ್ ಕೊರೊನಾಗೆ ಸಂಬಂಧಿಸಿದಂತೆ ಪ್ರೋಟೋಕಾಲ್ ಮೀರುತ್ತಿದ್ದು, ವ್ಯಾಕ್ಸಿನೇಷನ್ ಕಾರ್ಯಕ್ರಮದ ವಿರುದ್ಧ ತಮ್ಮ ಪತಂಜಲಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸದಾ ಚಿಂತನೆ ನಡೆಸುತ್ತಿದ್ದಾರೆ" ಎಂದು ಹೇಳಿದೆ.
ಇನ್ನು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ಸ್ (ಫೋರ್ಡಾ), ಮತ್ತು ರಾಮ್ದೇವ್ ವಿರುದ್ಧ ದೇಶದ ಇತರ ವೈದ್ಯಕೀಯ ಹಾಗೂ ನಿವಾಸಿ ವೈದ್ಯರ ಸಂಘಗಳು ಕರೆದ ಕಪ್ಪು ರಿಬ್ಬನ್ ಧರಿಸಿ ಪ್ರತಿಭಟನೆಗೆ ಐಎಂಎ ಬೆಂಬಲ ನೀಡಿದೆ.
ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರಿಂದ ಹಿಡಿದು ನಿರ್ಣಾಯಕ ಆರೈಕೆ ಮತ್ತು ತುರ್ತು ಆರೈಕೆ ವೈದ್ಯರವರೆಗೆ ಪ್ರತಿಯೊಬ್ಬ ವೈದ್ಯರನ್ನು ಜನರ ರಕ್ಷಣೆಗೆ ನಿಯೋಜಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದು, ರಾಷ್ಟ್ರೀಯ ಕೊರೊನಾ ಪ್ರೋಟೋಕಾಲನ್ನು ಮತ್ತು ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮದ ವಿರುದ್ಧ ಜನರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸುವುದು ರಾಷ್ಟ್ರೀಯ ವಿರೋಧಿ ಕೃತ್ಯವಾಗಿದ್ದು, ಇದನ್ನು ದೇಶದ್ರೋಹ ಎಂದು ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಮದೇವ್ ಕಾನೂನು ಕ್ರಮ ಜರುಗಿಸಲು ಐಎಂಎ ಒತ್ತಾಯಿಸಿದೆ ಎನ್ನಲಾಗಿದೆ.