ಬೆಂಗಳೂರು, ಜೂ.03 (DaijiworldNews/HR): ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದ್ದು, ಅಂತಹ ಮಕ್ಕಳೊಂದಿಗೆ ನಾವಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಕೊರೊನಾದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರನ್ನು ಪಾಲನೆ ಮಾಡುತ್ತಿರುವ ಪಾಲಕರ ಜೊತೆಗೆ ಗೂಗಲ್ ಮೀಟ್ ಮೂಲಕ ವಿಡಿಯೊ ಸಂವಾದ ನಡೆಸಿ, ಅವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿ, ಅವರ ಮನಸ್ಸಿನ ನೋವು, ಸಮಸ್ಯೆಗಳನ್ನು ಮನಗಂಡು, ಸರ್ಕಾರದಿಂದ ನೀಡಲಾಗುವ ನೆರವಿನ ಕುರಿತು ಮಾಹಿತಿ ನೀಡಿದ್ದಾರೆ,
ಇನ್ನು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ 19 ಮಕ್ಕಳ ಜೊತೆಗೆ ಸುಮಾರು ಮೂರು ಗಂಟೆಗಳ ಕಾಲ ಪ್ರತಿಯೊಬ್ಬ ಮಗುವಿನ ಜೊತೆಗೂ ವಯಕ್ತಿಕವಾಗಿ ಚರ್ಚೆ ನಡೆಸಿ, ತಂದೆ ತಾಯಿಗಳನ್ನು ಕಳೆದುಕೊಂಡ ಮಕ್ಕಳ ಪೋಷಕರ ಕಷ್ಟಗಳ ಬಗ್ಗೆ ಮಾಹಿತಿ ಪಡೆದುಕೊಂದಿದ್ದಾರೆ.
"ಪೋಷಕರನ್ನು ಕಳೆದುಕೊಂಡ ಆ ಮಕ್ಕಳ ನೋವು ಕಂಡು ಮನಸ್ಸು ಭಾರವಾಯಿತು. ಹೀಗಾಗಿ ಇಂತಹ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಪೋಷಕರು ಇಲ್ಲ ಎಂಬ ಕೊರಗು ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು 'ಬಾಲ ಸೇವಾ' ಯೋಜನೆಯನ್ನು ಘೋಷಿಸಿದ್ದು, ಸರ್ಕಾರದಿಂದ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ನೀಡುತ್ತೇವೆ. ಮುಂದೇನಾದರೂ ಅಗತ್ಯವಿದ್ದಲ್ಲಿ ಅಗತ್ಯ ನೆರವು ನೀಡಲು ಸರ್ಕಾದ ಸದಾ ಸಿದ್ಧವಿದೆ"ಎಂದು ಹೇಳಿದ್ದಾರೆ.