ಕೋಲ್ಕತ್ತ, ಜೂ.03 (DaijiworldNews/HR): ಬಂಗಾಳದಲ್ಲಿ ಕೊರೊನಾ ನಿರ್ವಹಣೆಯ ಅಕ್ರಮಗಳ ಬಗ್ಗೆ ತಿಳಿದಿರುವ ಕಾರಣ ಮಾಜಿ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರನ್ನು ರಕ್ಷಿಸಲು ಮಮತಾ ಬ್ಯಾನರ್ಜಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸಭೆಗೆ ಗೈರಾಗಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಅವರು ನಿವೃತ್ತರಾದ ದಿನ ಕೇಂದ್ರ ಗೃಹ ಸಚಿವಾಲಯವು ಬಂದೋಪಾಧ್ಯಾಯರಿಗೆ ಶೋ-ಕಾಸ್ ನೋಟಿಸ್ ನೀಡಿದ್ದು, ಬಳಿಕ ಅವರನ್ನು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿ ಸಿಎಂ ಮಮತಾ ಬ್ಯಾನರ್ಜಿ ಆದೇಶಿಸಿದ್ದರು.
ಇನ್ನು ಪಶ್ಚಿಮ ಬಂಗಾಳದ ಜನರಿಗಾಗಿ ಕೆಲಸ ಮಾಡುತ್ತಿರುವುದರಿಂದ ಬಿಜೆಪಿ, ಬಂದೋಪಾಧ್ಯಾಯ ಅವರನ್ನು ಗುರಿಯಾಗಿಸಿತ್ತು ಎಂದು ಟಿಎಂಸಿ ಆರೋಪಿಸಿತ್ತು.
ಇದಕ್ಕೆ ತಿರುಗೇಟು ನೀಡಿರುವ ಸುವೇಂದು ಅಧಿಕಾರಿ, "ಆಲಾಪನ್ ಬಂದೋಪಾಧ್ಯಾಯರಿಗೆ ಟಿಎಂಸಿ ಸರ್ಕಾರದ ಅನೇಕ ಅಕ್ರಮಗಳು ತಿಳಿದಿದ್ದವು. ಅಕ್ರಮಗಳನ್ನು ಕಂಡು ಕಾಣದಂತೆ ಯಾವುದೇ ಕ್ರಮ ಕೈಗೊಳ್ಳದೆ ಅವರು ಸುಮ್ಮನಿದ್ದರು. ಆದ್ದರಿಂದ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಂದೋಪಾಧ್ಯಾಯರನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.