ಕಾಶ್ಮೀರ, ಜೂ 3(DaijiworldNews/MS): ಭಯೋತ್ಪಾದಕರು ಬಿಜೆಪಿ ಪುರಸಭೆಯ ಸದಸ್ಯನನ್ನು ಗುಂಡಿಟ್ಟು ಕೊಂದಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಯಾದವರನ್ನು ರಾಕೇಶ್ ಪಂಡಿತ್ ಎಂದು ಗುರುತಿಸಲಾಗಿದೆ.
ಬಿಜೆಪಿ ಕೌನ್ಸಿಲರ್ ರಾಕೇಶ್ ತನ್ನ ಸ್ನೇಹಿತನನ್ನು ಭೇಟಿಯಾಗಲೆಂದು ಟ್ರಾಲ್ ಪಯೀನ್ಗೆ ಬಂದಿದ್ದರು. ಇದನ್ನು ಅರಿತ ಮೂವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ರಾಕೇಶ್ ಪಂಡಿತ್ ಸಾವನ್ನಪ್ಪಿದ್ದು, ಅವರ ಸ್ನೇಹಿತನ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ರಾಕೇಶ್ ಪಂಡಿತ್ ಶ್ರೀನಗರದ ವಸತಿ ಗೃಹದಲ್ಲಿ ವಾಸಿಸುತ್ತಿದ್ದು, ಜೀವಬೆದರಿಕೆ ಇದ್ದ ಹಿನ್ನಲೆಯಲ್ಲಿ ಅವರಿಗೆ ಇಬ್ಬರು ಭದ್ರತಾ ಪಡೆಗಳನ್ನು ಒದಗಿಸಲಾಗಿತ್ತು. ಆದರೆ ತ್ರಾಲ್ ನ ಸ್ನೇಹಿತನ ಮನೆಗೆ ಹೋಗುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿರಲಿಲ್ಲ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಅವರು, ಬಿಜೆಪಿ ಕಾರ್ಯಕರ್ತ ರಾಕೇಶ್ ಪಂಡಿತ್ ಅವರ ಬಲಿಯನ್ನು ವ್ಯರ್ಥವಾಗಲು ಬಿಡುವುದಿಲ್ಲ. ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದಕರ ರಕ್ತದೋಕುಳಿಯನ್ನುಂಟು ಮಾಡುವ ಮೂಲಕ ನಿರ್ಮೂಲನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಕುರಿತಂತೆ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದು, ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.