ನವದೆಹಲಿ, ಜೂ.03 (DaijiworldNews/HR): ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ) ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿಗೆ ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಪ್ರಕರಣದಲ್ಲಿ ಜಾಮೀನು ನೀಡುವುದಕ್ಕೆ ಡೊಮಿನಿಕಾ ಮ್ಯಾಜಿಸ್ಟ್ರೇಟ್ ಕೋರ್ಟ್ ನಿರಾಕರಿಸಿದೆ ಎಂದು ತಿಳಿದು ಬಂದಿದೆ.
ಡೊಮಿನಿಕಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿ ನಿರಾಕರಿಸಿದ ಬೆನ್ನಲ್ಲೇ ಹೈಕೋರ್ಟ್ ಮೊರೆ ಹೋಗುವುದಾಗಿ ಉದ್ಯಮಿ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ.
ಮೆಹುಲ್ ಚೋಕ್ಸಿ ಭಾರತದಿಂದ 2018ರಿಂದ ಪರಾರಿಯಾಗಿದ್ದು, ಆಯಂಟಿಗಾ ಮತ್ತು ಬರ್ಬುಡಾ ದೇಶದಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಆಯಂಟಿಗಾದಿಂದ ನಾಪತ್ತೆಯಾಗಿದ್ದ ಚೋಕ್ಸಿಯನ್ನು ಮೇ 26 ಡೊಮಿನಿಕಾ ದೇಶದಲ್ಲಿ ಬಂಧಿಸಿದ್ದರು.
ಇನ್ನು ಡೊಮಿನಿಕಾ ದೇಶದೊಳಗೆ ಅಕ್ರಮ ಪ್ರವೇಶ ಮಾಡಿದ ಕಾರಣಕ್ಕೆ ಮೆಹುಲ್ ಚೋಕ್ಸಿಯನ್ನು ಆ ದೇಶದ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು.
ಭಾರತದ ಬ್ಯಾಂಕಿಗೆ ವಂಚಿಸಿರುವ ಮೆಹುಲ್ ಚೋಕ್ಸಿ ಸಲ್ಲಿಸಿರುವ ಅರ್ಜಿ ಸಮರ್ಥನೀಯಲ್ಲ. ನ್ಯಾಯಾಲಯವು ಈ ಅರ್ಜಿಯನ್ನು ವಿಚಾರಣೆಗೊಳಪಡಿಸಬಾರದು ಎಂದು ಡೊಮಿನಿಕಾ ಪಬ್ಲಿಕ್ ಪ್ರಾಸಿಕ್ಯೂಷನ್ ವಾದ ಮಂಡಿಸಿದ್ದು, ಮೆಹುಲ್ ಚೋಕ್ಸಿ ಭಾರತೀಯ ಪ್ರಜೆಯಾಗಿ ಮುಂದುವರಿಯಲಿದ್ದಾರೆ ಎಂದು ಡೊಮಿನಿಕಾ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.