ಬೆಂಗಳೂರು, ಜೂ 3(DaijiworldNews/MS): ರಾಜ್ಯದಲ್ಲಿ ಜೂ. 7 ರ ಬಳಿಕವೂ ಮತ್ತೊಂದು ವಾರ ಲಾಕ್ಡೌನ್ ಮುಂದುವರೆಯುವುದು ಬಹುತೇಕ ಖಚಿತವಾಗಿದ್ದು ಸದ್ಯ ಇರುವ ಕಠಿಣ ನಿಯಮಾವಳಿಯನ್ನು ಮುಂದುವರಿಸಿ ಕೇವಲ ರಪ್ತು ಉದ್ಯಮಗಳಿಗೆ ಮಾತ್ರ ವಿನಾಯಿತಿ ಕೊಡುವ ಸಾಧ್ಯತೆ ಇದೆ.
ಕೊರೊನಾ ಸೋಂಕು ನಿಯಂತ್ರಣದ ಜವಬ್ದಾರಿ ಹೊತ್ತಿರುವ ಸಚಿವರು, ಅಧಿಕಾರಿಗಳ ಜತೆ ಪರಿಸ್ಥಿತಿ ಪರಾಮರ್ಶೆ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕರ್ನಾಟಕದಲ್ಲಿ ಇನ್ನೂ ಕೊರೋನಾ ಪ್ರಕರಣಗಳನ್ನು ಹತೋಟಿಗೆ ಬಂದಿಲ್ಲ. ಹೀಗಾಗಿ, ಲಾಕ್ಡೌನ್ ಮುಂದುವರಿಸಲಾಗುವುದು ಲಾಕ್ಡೌನ್ನಿಂದಾಗಿ ಅನೇಕ ಸಮುದಾಯಗಳು, ಕೂಲಿ-ಕಾರ್ಮಿಕರಿಗೆ ತೊಂದರೆ ಉಂಟಾಗಿದ್ದು, ಮುಂದಿನ 2-3 ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ವರದಿ ಆಧಾರದ ಮೇಲೆ ಸೆಮಿ ಲಾಕ್ಡೌನ್ ಅನ್ನು ಜೂ.7ರಿಂದ ಮತ್ತೆ ಒಂದು ವಾರ ವಿಸ್ತರಿಸಬೇಕಿದೆ. ಹಳ್ಳಿಗಳಲ್ಲಿ ಕೊರೊನಾ ಸೋಂಕು ಇನ್ನು ಕಡಿಮೆ ಆಗಿಲ್ಲ. ಹೀಗಾಗಿ ಮುಂದಿನ ಲಾಕ್ಡೌನ್ ಅವಧಿಗಾಗಿ ಮತ್ತಷ್ಟುಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕಾಗಿದ್ದು ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಬೇಕಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ .
ಹೀಗಾಗಿ 4 ಅಥವಾ 5ರಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಮತ್ತೊಮ್ಮೆ ಸಭೆ ನಡೆಸುವ ಸಾಧ್ಯತೆ ಇದ್ದು ಅಂದೇ ಲಾಕ್ ಡೌನ್ ಕುರಿತು ಅಂತಿಮ ನಿರ್ಧಾರ ಹೊರಬರಲಿದೆ.