ಮೈಸೂರು, ಜೂ 02 (DaijiworldNews/MS): ಕೊರೊನಾದಿಂದ ಜನಜೀವನವೇ ಅಸ್ತವ್ಯಸ್ತವಾಗಿದ್ದು ಹಲವರ ಬದುಕು ಮೂರಾಬಟ್ಟೆಯಾಗಿದೆ. ಒಂದಷ್ಟು ಜನ ಒಪ್ಪೊತ್ತಿನ ಊಟಕ್ಕೂ ಪರದಾಡಿದ್ರೆ ಮೈಸೂರಿನ ನಿವಾಸಿ ನಿವೃತ್ತ ಅಧಿಕಾರಿಯ ಸಮಸ್ಯೆ ಬೇರೆಯೇ ಆಗಿದೆ.
" ತನ್ನಲ್ಲಿ ಎರಡೇ ಜತೆ ಒಳ ಉಡುಪುಗಳಲಿದ್ದು ಅವುಗಳು ಹರಿದಿದೆ, ದಯವಿಟ್ಟು ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆಯಿಸಿ ಸಮಸ್ಯೆ ಬಗೆಹರಿಸಿ" ಎಂದು ಮುಖ್ಯಮಂತ್ರಿಗೆ ನ್ಯಾಯಾಂಗ ಇಲಾಖೆ ನಿವೃತ್ತ ಅಧಿಕಾರಿ ಕೊ.ಸು.ನರಸಿಂಹ ಮೂರ್ತಿ ಅವರು ಪತ್ರ ಬರೆದಿದ್ದಾರೆ.
ಪತ್ರದ ವಿವರ ಹೀಗಿದೆ:
ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸೀತು. ಆದರೆ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ. ಲಾಕ್ಡೌನ್ ಮುಂದುವರಿಸುವ ಎಲ್ಲ ಲಕ್ಷಣಗಳೂ ನಿಚ್ಚಳವಾಗುತ್ತಿದೆ. ಜನರ ಅಗತ್ಯಗಳ ಬಗ್ಗೆ ಸರ್ಕಾರ/ ಜಿಲ್ಲಾಡಳಿತ ಕಣ್ಣಿಟ್ಟು ಗಮನಹರಿಸಬೇಕು. ಕಳೆದೆರಡು ತಿಂಗಳಿಂದ ಎಲ್ಲ ಅಂಗಡಿಗಳು ತೆರೆಯುತ್ತಿದ್ದರೂ ಅದ್ಹೇಕೋ ಬಟ್ಟೆ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಇದರಿಂದ ಜನರಿಗಾಗುತ್ತಿರುವ ಕಷ್ಟವೇನು ಅಂತ ನೋಡಿದ್ದೀರಾ? ಕೇವಲ ಎರಡು ಜತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂಥವರ ಒಳ ಚಡ್ಡಿ ಹಾಗೂ ಬನಿಯನ್ಗಳು ಹರಿಯುತ್ತಿವೆ. ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಆಗಿರಬಹುದು. ಯಾರ ಬಳಿ ಹೇಳ್ಹೋಣ ನಮ್ಮ ಸಮಸ್ಯೆ?
ಜನರ ಅಂತರಾಳದ ಕಷ್ಟ ನಿಮಗೆ ಗೊತ್ತಾದರೆ ಸಾಕು. ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ! ಹೊಟ್ಟೆ ಬಗ್ಗೆ ಗಮನ ಹರಿಸುವ ಸರ್ಕಾರ ಬಟ್ಟೆ ಬಗ್ಗೆಯೂ ಚಿಂತಿಸಬೇಕು.
ಕೊ.ಸು.ನರಸಿಂಹ ಮೂರ್ತಿ
ಚಾಮರಾಜಪುರಂ
ಮೈಸೂರು