ನವದೆಹಲಿ, ಜೂ 02 (DaijiworldNews/MS): ವಿದೇಶಕ್ಕೆ ಪರಾರಿಯಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ಸಿಬಿಐ ಡಿಐಜಿ ನೇತೃತ್ವದ ಶಾರದ ರೌತ್ ಅವರನ್ನೊಳಗೊಂಡ ಎಂಟು ಸದಸ್ಯರ ತಂಡವು ಡೊಮಿನಿಕಾಗೆ ತೆರಳಿದೆ.
ಡೊಮಿನಿಕಾ ಕೋರ್ಟ್ ಚೋಕ್ಸಿಯನ್ನು ಗಡಿಪಾರು ಮಾಡಲು ಅವಕಾಶ ನೀಡಿದರೆ, ಭಾರತದ ತಂಡವು ಚೋಕ್ಸಿಯನ್ನು ಬಂಧಿತ ಭಾರತಕ್ಕೆ ಕರೆತರಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮೇ 28 ರಂದು ಪುಟ್ಟ ದ್ವೀಪ ರಾಷ್ಟ್ರವನ್ನು ತಲುಪಿದ ಈ ತಂಡ ಇಂದು ಮೆಹುಲ್ ಚೋಕ್ಸಿ ಕುರಿತ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿದ್ದು, ಅಲ್ಲಿನ ಸರ್ಕಾರಕ್ಕೆ ರಾಜಕೀಯವಾಗಿ ವಿವಾದಾಸ್ಪದವಾಗಿರುವ ಚೋಕ್ಸಿ ಪ್ರಕರಣದಲ್ಲಿ ಡೊಮಿನಿಕನ್ ಪಬ್ಲಿಕ್ ಪ್ರಾಸಿಕ್ಯೂಟರ್ಗಳಿಗೆ ಸಹಾಯ ಮಾಡಲಿದೆ.
ಡೊಮಿನಿಕಾದ ಹೈಕೋರ್ಟ್ನಲ್ಲಿ ಮೆಹುಲ್ ಚೋಕ್ಸಿ ಪ್ರಕರಣದ ವಿಚಾರಣೆಯು ಬುಧವಾರ ಅಲ್ಲಿನ ಸ್ಥಳೀಯ ಕಾಲಮಾನದಂತೆ ನಡೆಯಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಆರೋಪಿ ಮೆಹುಲ್ ಚೋಕ್ಸಿ 2018ರಲ್ಲಿ ಭಾರತವನ್ನು ತೊರೆದು ಆಂಟಿಗುವಾಕ್ಕೆ ಪರಾರಿಯಾಗಿದ್ದ. ಅಲ್ಲಿನ ಪೌರತ್ವ ಪಡೆದಿದ್ದ ಚೋಕ್ಸಿ, ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಅಕ್ರಮವಾಗಿ ಡೊಮಿನಿಕಾ ದ್ವೀಪರಾಷ್ಟ್ರವನ್ನು ನುಸುಳಿ, ಅಲ್ಲಿನ ಪೊಲೀಸರಿಂದ ಬಂಧಿತರಾಗಿದ್ದ.
ಇನ್ನು ಮೆಹುಲ್ ಚೋಕ್ಸಿ ನಾಪತ್ತೆ ಪ್ರಕರಣದಲ್ಲಿ ಡೊಮಿನಿಕಾ ಹಾಗೂ ಆಂಟಿಗುವಾ ಮತ್ತು ಬಾರ್ಬುಡಾ ಸರ್ಕಾರ ಭಾಗಿಯಾಗಿದೆ ಎಂದು ಅಲ್ಲಿನ ವಿರೋಧ ಪಕ್ಷಗಳು ಆರೋಪವನ್ನು ಮಾಡುತ್ತಿದ್ದು ಸರ್ಕಾರವೇ ಉದ್ಯಮಿಯ ಅಪಹರಣವನ್ನು ನಡೆಸಿದೆ ಎಂದಿವೆ.