ಚಿಕ್ಕಮಗಳೂರು, ಜೂ 02 (DaijiworldNews/MS): ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡಿರುವ ಸಬ್ ಇನ್ಸ್ಪೆಕ್ಟರ್ ಕೆ. ಅರ್ಜುನ್ ಹೊರಕೇರಿ ಅವರಿಗೆ ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.
ಪ್ರಕರಣವೊಂದರ ವಿಚಾರಣೆಗೆಂದು ಕರೆತಂದು ಪಿಎಸ್ಐ ಬೇರೆ ಆರೋಪಿಯ ಮೂತ್ರ ಕುಡಿಸಿದ್ದರು ಎಂದು ಯುವಕನೋರ್ವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ. ಅರ್ಜುನ್ ವಿರುದ್ಧ ಕಿರಗುಂದ ಗ್ರಾಮದ ಯುವಕ ಕೆ ಎಲ್ ಪುನೀತ್ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಅರ್ಜುನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಪೊಲೀಸರು ವ್ಯಕ್ತಿಗಳನ್ನು ಅಕ್ರಮ ಬಂಧನದಲ್ಲಿರಿಸುವುದು ಮತ್ತು ಚಿತ್ರಹಿಂಸೆ ನೀಡುವುದು ಅವರ ಕರ್ತವ್ಯದ ಭಾಗವಲ್ಲ, ಆರೋಪದ ಸ್ವರೂಪ ಅತ್ಯಂತ ಘೋರವಾಗಿದ್ದು, ಇಂತಹ ದೌರ್ಜನ್ಯ ವೈಯಕ್ತಿಕ ಘನತೆಗೆ ಧಕ್ಕೆ ತರುತ್ತದೆ ಎಂದು ಅಭಿಪ್ರಾಯಪಟ್ಟು ಜಾಮೀನು ನಿರಾಕರಣೆಗೆ ಕಾರಣವಾದ ವಿವಿಧ ಅಂಶಗಳನ್ನು ಪ್ರಥಮ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶ ಕೆ ಎಲ್ ಅಶೋಕ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.