ತಿರುಪತಿ, ಜೂ.01 (DaijiworldNews/HR): ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿರುವ ನ್ಯಾಯಾಲಯಕ್ಕೆ ದಯಾ ಮರಣ ಅರ್ಜಿ ಸಲ್ಲಿಸಲು ಪೋಷಕರು ಕರೆತಂದ 10 ವರ್ಷದ ಬಾಲಕ ಮಂಗಳವಾರ ನ್ಯಾಯಾಲಯದ ಆವರಣದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಹರ್ಷವರ್ಧನ್ ಎಂಬ ಹುಡುಗ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ಚೌಡೆಪಲ್ಲಿ ಮಂಡಲದ ಡೆಚುಪಲ್ಲಿ ಗ್ರಾಮದಲ್ಲಿರುವ ತನ್ನ ಮನೆಯ ಟೆರೇಸ್ನಿಂದ ಬಿದ್ದು ತಲೆಗೆ ಗಾಯವಾಗಿದ್ದು, ಅಂದಿನಿಂದ ಅವನು ಹಾಸಿಗೆಗೆ ಸೀಮಿತನಾಗಿದ್ದನು ಮತ್ತು ಅವನನ್ನು ಸಾಮಾನ್ಯ ಸ್ಥಿತಿಗೆ ತರಲು ಅವನ ಹೆತ್ತವರ ಪ್ರಯತ್ನಗಳು ವ್ಯರ್ಥವಾಗಿದೆ.
ಇನ್ನು ಈ ಕುಟುಂಬವು ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ಮತ್ತು ನೆರೆಯ ತಮಿಳುನಾಡಿನ ವೆಲ್ಲೂರು ಮತ್ತು ಇತರ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಹರ್ಷವರ್ಧನ್ ಗೆ ಚಿಕಿತ್ಸೆ ಕೊಡಿಸಿದರು ಬಾಲಕನ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ.
ತಮ್ಮ ಮಗನಿಗೆ ಚಿಕಿತ್ಸೆ ಪಡೆಯಲು ಹರ್ಷವರ್ಧನ್ ಅವರ ಪೋಷಕರು 4 ಲಕ್ಷ ರೂ.ಗಿಂತ ಹೆಚ್ಚಿನ ಸಾಲವನ್ನು ಹೊಂದಿದ್ದು, ತಮ್ಮ ಮಗನ ಚಿಕಿತ್ಸೆಗೆ ಹೆಚ್ಚಿನ ವೆಚ್ಚವನ್ನು ಭರಿಸಬೇಕಾದ ಸ್ಥಿತಿಯಲ್ಲಿಲ್ಲದ ಕಾರಣ, ಅವರು ದಯಾ ಮರಣ ಅರ್ಜಿಯನ್ನು ಸಲ್ಲಿಸಲು ಪುಂಗನೂರಿನ ನ್ಯಾಯಾಲಯದ ಆವರಣಕ್ಕೆ ಹೋಗಿದ್ದು, ಈ ವೇಳೆ ನ್ಯಾಯಾಲಯದ ಆವರಣದಲ್ಲಿಯೇ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.