ಮುಂಬೈ, ಜೂ 01(DaijiworldNews/MS): ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಮೂಲಕ ಫೇಮಸ್ ಆಗಿರುವ ನಟ ಕರಣ್ ಮೆಹ್ರಾ ಅವರ ಸಂಸಾರದಲ್ಲಿ ಓಡಕು ಮೂಡಿದ್ದು ಪತ್ನಿಯನ್ನು ಥಳಿಸಿದ ಆರೋಪದ ಮೇಲೆ ಹಿಂದಿ ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ಮುಂಜಾನೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಜಾಮೀನಿನ ಮೇಲೆ ಹೊರಬಂದಿರುವ ಕರಣ್ ಪತ್ನಿ ವಿರುದ್ಧವೇ ಆರೋಪ ಮಾಡಿದ್ದು ಪತ್ನಿ ನಿಶಾ ಹಾಗೂ ಆಕೆಯ ಸಹೋದರ ರೋಹಿತ್ ಸೇಟಿಯಾ ಸೇರಿಕೊಂಡು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕರಣ್ ಹೇಳಿದ್ದಾರೆ.
ಮೂಲಗಳ ಪ್ರಕಾರ ದಂಪತಿಗಳ ನಡುವೆ ಜಗಳ ನಡೆದಿದ್ದು, ನಿಶಾ ಪತಿ ವಿರುದ್ಧ ಪೊಲೀಸ್ಗೆ ದೂರು ನೀಡಿದ್ದರು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಗೋರೆಗಾಂವ್ ಪೊಲೀಸರಿಗೆ ತಮ್ಮ ನಿಯಂತ್ರಣ ಕೊಠಡಿಯಿಂದ ಕರೆ ಬಂದಿದ್ದು, ಕೂಡಲೇ ಮನೆಗೆ ತೆರಳಿದ ಪೊಲೀಸರು ಕರಣ್ ರನ್ನು ವಶಕ್ಕೆ ಪಡೆದಿದ್ದರು. ಕರಣ್ ವಿರುದ್ಧ ಐಪಿಸಿ ಸೆಕ್ಷನ್, 336, 337, 332, 504 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮಂಗಳವಾರ ಮುಂಜಾನೆ ಅವರನ್ನು ಪೊಲೀಸ್ ಠಾಣೆಯಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.