ಬೆಂಗಳೂರು, ಜೂ 01(DaijiworldNews/MS): ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಅಧಿಕಾರದ ಭಿಕ್ಷುಕರ ಬಗ್ಗೆ ಮಾತನಾಡಿ ಟೈಮ್ ವೆಸ್ಟ್ ಮಾಡುವ ಬದಲು, ಜನರ ಜೀವ ರಕ್ಷಣೆಯತ್ತ ನಾವು ಗಮನ ಕೊಡುತ್ತೇವೆ ಎಂದಿದ್ದಾರೆ.
ರಾಜ್ಯ ಕೊವೀಡ್ ನಿಂದ ಸಂಕಷ್ಟದಲ್ಲಿದ್ದರೆ, ಬಿಜೆಪಿ ನಾಯಕರು ವರಿಷ್ಟರ ಭೇಟಿಗೆ ದೆಹಲಿಗೆ ಅಧಿಕಾರಕ್ಕಾಗಿ ಬೆಗ್ ಮಾಡುತ್ತಿದ್ದಾರೆ. ನಮಗೆ ಬಿಜೆಪಿಯ ಆಂತರಿಕ ಬೆಳವಣಿಗೆಗಳ ಬಗ್ಗೆಯಾಗಲಿ ಪವರ್ ಬೆಗ್ಗರ್ಸ್ ಬಗ್ಗೆಯಾಗಲಿ ಆಸಕ್ತಿ ಇಲ್ಲ. ಸದ್ಯಕ್ಕೆ ನಮ್ಮ ಆದ್ಯತೆ ಏನಿದ್ದರೂ ಜನರ ಜೀವ ಉಳಿಸುವುದಾಗಿದೆ ಎಂದು ಸ್ಪಷ್ಟಪಡಿಸಿದರು.
ಸದ್ಯದ ಪರಿಸ್ಥಿತಿಯನ್ನು ಯಡಿಯೂರಪ್ಪ ಅವರೇ ಕ್ರಿಯೇಟ್ ಮಾಡಿದ್ದು, ತಾವು ಮಾಡಿದ ಪಾಪಕ್ಕೆ ತಕ್ಷಣವೇ ಪ್ರತಿಫಲ ಸಿಕ್ಕಿ ಬಿಡುತ್ತದೆ. ಯಾರ್ಯಾರನ್ನೋ ಕರೆದುಕೊಂಡು ಹೋಗಿ ಸರ್ಕಾರ ರಚನೆ ಮಾಡಿದ್ದಾರೋ ಅವರಿಂದ ಈ ಮೊದಲು ನಾವು ಸಾಕಷ್ಟು ಅನುಭವಿಸಿದ್ದೇವೆ. ಈಗ ಯಡಿಯೂರಪ್ಪ ಅವರು ಅನುಭವಿಸುತ್ತಿದ್ದಾರೆ ಎಂದರು.
ಹೀಗಾಗಿ ಪವರ್ ಬೆಗ್ಗರ್ಸ್ ದೆಹಲಿಗಾದರೂ ಹೋಗಲಿ, ಅಂಡಮಾನ್ ಗಾದರೂ ಹೋಗಲಿ ನಮಗೇನು? ಸದ್ಯ ಜನರ ಜೀವ ಉಳಿಸಬೇಕಾಗಿದೆ. ರಾಜ್ಯ ಸರ್ಕಾರ ಲಾಕ್ ಡೌನ್ ಅಂಗವಾಗಿ ಘೋಷಣೆ ಮಾಡಿರುವ ಪ್ಯಾಕೇಜ್ ರಿಯಲ್ ಅಲ್ಲ, ರೀಲ್ ಆಗಿದೆ, ವ್ಯಾಪಾರ, ವಹಿವಾಟುಗಳಿಲ್ಲದೆ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ ಆದರೆ ಈ ಸರ್ಕಾರಕ್ಕೆ ಮಾತ್ರ ಮಾನವೀಯತೆ ಇಲ್ಲ ಎಂದು ಕಿಡಿಕಾರಿದರು.